ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್(Nirmala Sitharaman) ಅವರ ನಾಲ್ಕನೇ ಬಜೆಟ್ ಇಂದು ಮಂಡಿಸಿದ್ದು, ಈ ಬಜೆಟ್ 39 ಲಕ್ಷ ಕೋಟಿ ರೂಪಾಯಿಯ ಬಜೆಟ್ ಇದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಡಿಕೆ ಸುರೇಶ್(D. K. Suresh) ಈ ಬಜೆಟ್ ಉಪ್ಪು ಹುಳಿ ಕಾರ ಯಾವುದು ಇಲ್ಲದ ಬಜೆಟ್ ಇದಾಗಿದೆ. ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಈ ಬಜೆಟ್ ಮೇಲೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಬಹಳ ಅಚ್ಚರಿ ವಿಚಾರ ಎಂದರೆ ಕೇಂದ್ರ ಸರ್ಕಾರಕ್ಕೆ ಜನವರಿ ತಿಂಗಳಲ್ಲಿ 1.40 ಲಕ್ಷ ಕೋಟಿ ರೂ ಆದಾಯ ಬಂದಿದೆ ಎಂದು ಹೇಳಿದ್ದಾರೆ. ಇವರು GSTಯಲ್ಲಿ ಶೇ.18, ಶೇ.28 ರಷ್ಟು ತೆರಿಗೆ ವಿಧಿಸಿದರೆ ಆದಾಯ ಬಂದೇ ಬರುತ್ತದೆ. ಆದರೆ ಬಡವರು, ಮಧ್ಯಮವರ್ಗದವರ ತೆರಿಗೆ ಕಡಿಮೆ ಮಾಡುವ ಬಗ್ಗೆ ಪ್ರಸ್ತಾಪವೇ ಇಲ್ಲ. ಇದು ಸರ್ಕಾರ ಎಲ್ಲರಿಂದಲೂ ತೆರಿಗೆ ವಸೂಲು ಮಾಡುವುದರಲ್ಲಿ ನಿರತವಾಗಿದ್ದು, ಯಾರೂ ಅಡ್ಡಿಪಡಿಸಬೇಡಿ ಎಂದು ಹೇಳುವಂತಿದೆ , ಕೇಂದ್ರ ಸರ್ಕಾರ ಬಜೆಟ್ ನಲ್ಲಿ ರಾಜ್ಯಗಳಿಗೆ ಸಾಲದ ರೂಪದಲ್ಲಿ ಅನುದಾನ ನೀಡುವುದಾಗಿ ಹೇಳಿದೆ. ಬಡವರಿಗೆ ಮನೆ ನೀಡುತ್ತೇವೆ ಎಂದಿದೆ. ಆದರೆ ಅದನ್ನು ಕಟ್ಟಲು ಬೇಕಾಗಿರುವ ಸಾಮಾಗ್ರಿಗಳ ಬೆಲೆ ಕಡಿಮೆ ಮಾಡಿಲ್ಲ. ಈ ಬಜೆಟ್ ನಲ್ಲಿ ಕನಿಷ್ಠ ಬೆಂಬಲ ಬೆಲೆ ಬಗ್ಗೆ ರೈತರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸರ್ಕಾರ ಬೆಂಬಲ ಬೆಲೆಯನ್ನು ಕಳೆದ ವರ್ಷದಷ್ಟೇ ಮುಂದುವರಿಸಿದೆ. ಜತೆಗೆ ಮಿತಿ ಹಾಕುವುದರ ಮೂಲಕ ಎಲ್ಲ ವರ್ಗದ ರೈತರಿಗೆ ಅನ್ಯಾಯ ಮಾಡಿರುವುದು ಎದ್ದು ಕಾಣುತ್ತದೆ ಎಂದು ಡಿ.ಕೆ. ಸುರೇಶ್ ಅಸಮಾಧಾನ ವ್ಯಕ್ತಪಡಿಸಿದರು. ಒಟ್ಟಾರೆಯಾಗಿ ಈ ಬಜೆಟ್ ನಲ್ಲಿ ಚರ್ಚೆ ಮಾಡುವಂತಹ ಯಾವುದೇ ಅಂಶಗಳಿಲ್ಲ. ರಕ್ಷಣಾ ಕ್ಷೇತ್ರದಲ್ಲಿ ಆಂತರಿಕ ಉತ್ಪಾದನೆ, 60 ಲಕ್ಷ ಉದ್ಯೋಗ ಸೃಷ್ಟಿ ಬಗ್ಗೆ ಹೇಳಿದ್ದಾರೆ. ಆ ಮೂಲಕ ಪ್ರಧಾನ ಮಂತ್ರಿಗಳು ನಮಗೆ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡಲು ಸಾಧ್ಯವಾಗಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದೆಲ್ಲವನ್ನು ನೋಡಿದರೆ ಈ ಬಜೆಟ್ ನಲ್ಲಿ ಬರೀ ಸುಳ್ಳು ಭರವಸೆಗಳೇ ತುಂಬಿವೆ. ಸರ್ಕಾರ ಯಾವುದೇ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಕ್ರಮ ಕೈಗೊಂಡಿಲ್ಲ ಎಂದು ಕಿಡಿ ಕಾರಿದರು. ರಾಜ್ಯಕ್ಕೆ ಅನುಕೂಲವಾಗುವ ಯಾವುದೇ ಅಂಶಗಳು ಈ ಬಜೆಟ್ ನಲ್ಲಿ ಇಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.