ಮಣಿಪುರ(Manipur)ದಲ್ಲಿ ವಿಧಾನಸಭಾ ಚುನಾವಣೆ(Assembly elections)ಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಇದೇ ವೇಳೆ ಟಿಕೆಟ್ ವಂಚಿತ ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ಕಮಲ ಪಕ್ಷ ತೊರೆದು ಕಾಂಗ್ರೆಸ್ ಕಡೆಗೆ ಹೊರಡುತ್ತಿದ್ದಾರೆ. ಯಾವುದೇ ಪಕ್ಷವಾದರೂ ಸಹಿ ಟಿಕೆಟ್ ಪಡೆದು ಕಣಕ್ಕಿಳಿಯಲು ಪೈಪೋಟಿ ಜೋರಾಗಿ ನಡೆಯುತ್ತಿದೆ. ರಾಜ್ಯದ 60 ವಿಧಾನಸಭಾ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಂತೆ ನೆನ್ನೆ ಮಣಿಪುರ ರಾಜ್ಯದಾದ್ಯಂತ ಪ್ರತಿಭಟನೆ ನಡೆದಿತ್ತು. ಟಿಕೆಟ್ ವಂಚಿತ ಬೆಂಬಲಿಗರು ಪಕ್ಷದ ಧ್ವಜ ಹಾಗೂ ನರೇಂದ್ರ ಮೋದಿ(pm modi), ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್(N. Biren Singh) ಅವರ ಪ್ರತಿಕೃತಿಗಳನ್ನು ಸುಟ್ಟು ಹಾಕಿದ್ದರು. ಪಕ್ಷದ ಅಭ್ಯರ್ಥಿ ಪಟ್ಟಿ ಘೋಷಣೆಯಾದ ಒಂದು ದಿನದ ನಂತರ, ಮೊಯಿರಾಂಗ್ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಪಿ ಶರತ್ ಚಂದ್ರ ಸಿಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ಸೆಕ್ಮೈ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರಾದ ನಿಂಗ್ತೌಜಮ್ ಬಿರೆನ್ ಮತ್ತು ನಿಂಗ್ತೌಜಮ್ ಜೋಯ್ಕುಮಾರ್ ಸಿಂಗ್ ಕೂಡ ಕೈ ಪಡೆ ಸೇರ್ಪಡೆಗೊಂಡಿದ್ದಾರೆ. 2017ರ ನಂತರ ಸೇರ್ಪಡೆಯಾದ ನಾಯಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಪಟ್ಟಿಯಲ್ಲಿರುವ 16 ಮಂದಿಯಲ್ಲಿ ಹತ್ತು ಮಂದಿ ಕಾಂಗ್ರೆಸ್‌ನವರಾಗಿದ್ದರೆ, 4 ಮಂದಿ ಇತರ ಪಕ್ಷಗಳಿಂದ ಸೇರಿದವರಾಗಿದ್ದಾರೆ. ಹೀಗಾಗಿ, ಮೂಲ ಬಿಜೆಪಿಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ಬರುವವರಿಗೆ ಸ್ವಾಗತ ಎಂದು ಮಣಿಪುರ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ವಕ್ತಾರ ಕೆ.ಎಚ್.ದೇವಬ್ರತ ತಿಳಿಸಿದ್ದಾರೆ. ಮಣಿಪುರ ಬಿಜೆಪಿ ಮೂರು ಮಹಿಳೆಯರು ಮತ್ತು ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದೆ. ಬಿಜೆಪಿಗೆ ಸೇರ್ಪಡೆಗೊಂಡ ಮಣಿಪುರ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಗೋವಿಂದಸ್ ಕೊಂತೌಜಮ್ ಕೂಡ ಚುನಾವಣೆಗೆ ಸ್ಪರ್ಧಿಸಲು ಪಕ್ಷದ ಟಿಕೆಟ್ ಪಡೆದಿದ್ದಾರೆ. ಮುಖ್ಯಮಂತ್ರಿಯವರ ಬಹುತೇಕ ನಿಷ್ಠಾವಂತರಿಗೆ ಪಕ್ಷದ ಟಿಕೆಟ್ ಸಿಕ್ಕಿದೆ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ. ಮಣಿಪುರದ 60 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತ ಫೆಬ್ರವರಿ 27ರಂದು 38 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎರಡನೇ ಮತದಾನ ಮಾರ್ಚ್ 3 ರಂದು ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರ ಬರಲಿದೆ. ಐದು ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ರಾಜ್ಯ ಚುನಾವಣೆಗಳು ನಡೆಯುತ್ತಿವೆ. ಇವುಗಳಲ್ಲಿ ಪಂಜಾಬ್, ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರ ಬರಲಿದೆ.