ರಷ್ಯಾ (Russia) ಉಕ್ರೇನ್ (Ukraine) ಮೇಲೆ ಯುದ್ಧ (war) ಸಾರಿದ್ದು, ಉಕ್ರೇನ್ ನ ರಾಜಧಾನಿಯ ಪ್ರಮುಖ ನಗರಗಳ ಮೇಲೆ ವಾಯು ದಾಳಿ(Air attack)ಯನ್ನು ಮಾಡಿದ್ದು, ಭಾರಿ ಪ್ರಮಾಣದ ಗುಂಡಿನ ದಾಳಿಯನ್ನು ನಡೆಸಿದೆ. ಇನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ರಷ್ಯಾ ಉಕ್ರೇನ್ ನಡುವಣ ಬಿಕ್ಕಟ್ಟು ಮಿಲಿಟರಿ ಕಾರ್ಯಾಚರಣೆಯಲ್ಲಿ ಯಾರು ಮಧ್ಯಪ್ರವೇಶ ಮಾಡಬಾರದು, ಮಧ್ಯ ಪ್ರವೇಶ ಮಾಡಿದರೆ ಅವರ ವಿರುದ್ಧ ಪ್ರತೀಕಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಇನ್ನು ವಿಶ್ವಸಂಸ್ಥೆಯಲ್ಲಿ ಎರಡು ರಾಷ್ಟ್ರಗಳ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ತಟಸ್ಥ ಗೊಳಿಸಲು ಭದ್ರತಾ ಮಂಡಳಿ ಸಭೆ ನಡೆಸಿ ಮಾತುಕತೆ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (United Nations Security Council) ಭಾರತ (India) ಮಾತನಾಡಿದ್ದು ಎರಡು ರಾಷ್ಟ್ರಗಳಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮನವಿಯನ್ನು ಮಾಡಿದೆ. ಎರಡು ರಾಷ್ಟ್ರಗಳ ನಡುವಿನ ಬಿಕ್ಕಟ್ಟಿನ ಬಗ್ಗೆ ಮಾತನಾಡಿರುವ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತಿರುಮೂರ್ತಿ (TS Thirumurthy), ರಷ್ಯಾ ಹಾಗೂ ಉಕ್ರೇನ್ ನಡುವಿನ ಪ್ರಸ್ತುತ ಪರಿಸ್ಥಿತಿಗೆ ತೀವ್ರ ಕಳವಳ ವ್ಯಕ್ತಪಡಿಸಿ, ನಾವು ಈಗಾಗಲೇ ಉಕ್ರೇನ್ ಮತ್ತು ಉಕ್ರೇನ್‌ನ ಪೂರ್ವ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ರಷ್ಯಾದ ಘೋಷಣೆಗಳನ್ನು ಗಮನಿಸುತ್ತಿದ್ದೇವೆ. ಈ ಎಲ್ಲಾ ಬೆಳವಣಿಗೆಗಳು ಉಭಯ ದೇಶಗಳ ಭದ್ರತೆ ಮತ್ತು ಶಾಂತಿಗೆ ಭಂಗವಾಗುವ ಸಾಧ್ಯತೆ ನಿಚ್ಚಳವಾಗಿದೆ. ಉದ್ವಿಗ್ನತೆಯನ್ನು ಶಾಂತಗೊಳಿಸುವುದು ಮತ್ತು ದೀರ್ಘಾವಧಿ ಶಾಂತಿ ಮತ್ತು ಸ್ಥಿರತೆಯನ್ನು (Peace and stability) ಭದ್ರಪಡಿಸುವುದು ತಕ್ಷಣದ ಆದ್ಯತೆಯಾಗಿದೆ. ಹೀಗಾಗಿ ಎರಡು ರಾಷ್ಟ್ರಗಳು ಸಂಯಮದಿಂದ ಇರಬೇಕು ಎಂದು ತಿರುಮೂರ್ತಿ ಹೇಳಿಕೆ ನೀಡಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಭಾರತೀಯ ಪ್ರಜೆಗಳು ಉಕ್ರೇನ್‌ನ ಗಡಿ ಪ್ರದೇಶಗಳನ್ನು ಒಳಗೊಂಡಂತೆ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ ಅವರನ್ನು ಸುರಕ್ಷಿತವಾಗಿ ಮರಳಿ ದೇಶಕ್ಕೆ ಕರೆತರಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿರುಮೂರ್ತಿ ತಿಳಿಸಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನು ಕರೆತರಲು ಏರಿಂಡಿಯಾದ 3 ವಿಶೇಷ ವಿಮಾನಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದು, ಮೊದಲ ಬ್ಯಾಚ್‌ನಲ್ಲಿ 250 ಜನರು ಭಾರತಕ್ಕೆ ಆಗಮಿಸಿದರು. ಇನ್ನೆರಡು ವಿಮಾನ ಫೆ. 24, 26ರಂದು ಕಾರ್ಯಾಚರಣೆ ನಡೆಸಲಿವೆ.