ಲಂಡನ್: ಇಡೀ ಕ್ರಿಕೆಟ್ ಜಗತ್ತು ನಾಳೆಯಿಂದ ಆರಂಭವಾಗಲಿರುವ ಭಾರತ -ಇಂಗ್ಲೆಂಡ್ ನಡುವಿನ ಐದನೆ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಎದುರು ನೋಡುತ್ತಿದೆ. ಅಂತಿಮ ಟೆಸ್ಟ್ ಪಂದ್ಯವನ್ನು ಗೆದ್ದು ಹೊಸ ಇತಿಹಾಸ ಬರೆಯಲು ಭಾರತ ತಂಡ ಕಾತರದಿಂದ ಕಾಯುತ್ತಿದೆ. ಆದರೆ ಇದು ಅಷ್ಟು ಸುಲಭವಿಲ್ಲ ಅನ್ನೋದು ಅಷ್ಟೆ ಸತ್ಯ.ಆಂಗ್ಲರನ್ನು ಎದುರು ನೋಡುತ್ತಿರುವ ಭಾರತಕ್ಕೆ ಈ ನಾಲ್ಕು ಆಯ್ಕೆಗಳು ಸವಾಲಾಗಿದೆ. ಈ ನಾಲ್ಕು ಅಂಶಗಳು ತಂಡದ ಗೆಲುವನ್ನು ನಿರ್ಧರಿಸಲಿದೆ.
ತಂಡದ ಆರಂಭಿಕರು ಯಾರು ?
ಆಂಗ್ಲರ ವಿರುದ್ಧದ ಅಂತಿಮ ಕದನಕ್ಕೆ ಭಾರತ ತಂಡದ ಆರಂಭಿಕರು ಯಾರು ಅನ್ನೋ ಪ್ರಶ್ನೆ ಕಾಡುತ್ತಿದೆ. ನಾಯಕ ರೋಹಿತ್ ಶರ್ಮಾ ಕೊರೋನಾ ಸೋಂಕಿಗೆ ಗುರಿಯಾಗಿ ಐಸೋಲೇಷನ್‍ಗೆ ಒಳಪಟ್ಟಿದ್ದಾರೆ. ರೋಹಿತ್ ಆಡುವುದಿಲ್ಲ ಅನ್ನೋದು ಖಚಿತವಾಗಿದೆ. ಶುಭಮನ್ ಗಿಲ್ ಜೊತೆ ಯಾರು ಆರಂಭಿಕರು ಅನ್ನೋ ಪ್ರಶ್ನೆ ಕಾಡುತ್ತಿದೆ. ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ, ಕೆ.ಎಸ್.ಭರತ್ ಮತ್ತು ಮಯಾಂಕ್ ಅಗರ್‍ವಾಲ್ ಆರಂಭಿಕ ಗಿಲ್ ಜೊತೆಗೆ ಕಣಕ್ಕಿಳಿಸಲು ಇರುವ ಆಯ್ಕೆಗಳು. ಈ ಹಿಂದಿನ ಸರಣಿಗಳಲ್ಲಿ ಚೇತೇಶ್ವರ ಪೂಜಾರ ಪ್ರಮುಖ ಪಾತ್ರವಹಿಸಿದ್ದರು. ಈ ಹಿಂದೆ ತವರಿನಲ್ಲಿ ಟೆಸ್ಟ್ ಸರಣಿ ಆಡುವಾಗ ಶುಭಮನ್ ಗಿಲ್ ಗಾಯಗೊಂಡಾಗ ಮಯಾಂಕ್ ಅಗರ್‍ವಾಲ್ ಆಡಿದ್ದರು. ಗಿಲ್ ಜೊತೆ ಮಯಾಂಕ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದ್ದು ವೇಗಗಳಾದ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್ ಮತ್ತು ಮ್ಯಾಥೀವ್ ಪಾಟ್ಸ್ ಅವರನ್ನು ಎದುರಿಸಬೇಕಿದೆ.
3ನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ ?
ತವರಿನಲ್ಲಿ ಶ್ರೀಲಂಕಾ ಸರಣಿ ವೇಳೆ ಆಯ್ಕೆ ಸಮಿತಿ ಅಜಿಂಕ್ಯ ರಹಾನೆ ಅವರನ್ನು ಕೈಬಿಟ್ಟಿತ್ತುಘಿ. ಆ ಸಮಯದಲ್ಲಿ ಪೂಜಾರ ಕೂಡ ಕಳಪೆ ಫಾರ್ಮ್‍ನಲ್ಲಿದ್ದರು. ಕೌಂಟಿ ಚಾಂಪಿಯನ್‍ಶಿಪ್‍ನಲ್ಲಿ ಸಸೆಕ್ಸ್ ತಂಡದ ಪರ ಪೂಜಾರ ಮೂರನೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಯಶಸ್ಸು ಕಂಡಿದ್ದರು.
ಮೂರನೆ ಕ್ರಮಾಂಕದಲ್ಲಿ ಆಡಲು ಪೈಪೋಟಿ ನಡೆಸುತ್ತಿರುವ ಮತ್ತೊರ್ವ ಆಟಗಾರ ಆಲ್ರೌಂಡರ್ ಹನುಮ ವಿಹಾರಿ. ಕೆಲವು ತಿಂಗಳ ಹಿಂದೆ ಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೂರು ಇನ್ನಿಂಗ್ಸ್‍ಗಳಲ್ಲೂ ವಿಹಾರಿ ಅರ್ಧ ಶತಕ ಸಿಡಿಸಿದ್ದರು. ಹನುಮ ವಿಹಾರಿಗೆ ಕೋಚ್ ಹಾಗೂ ಮಂಡಳಿಯಿಂದ ಬೆಂಬಲ ಬೇಕಿದೆ.
ಪೂಜಾರ ನಂ.3ರಲ್ಲಿ ಆಡುವ ನೆಚ್ಚಿನ ಆಟಗಾರರಾಗಿದ್ದಾರೆ. ಕಳೆದ ವರ್ಷ ಆಂಗ್ಲರ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಚೇತೇಶ್ವರ ಪೂಜಾರ ಆಗಿದ್ದಾರೆ. ಐತಿಹಾಸಿಕ ಲಾಡ್ರ್ಸ್ ಹಾಗೂ ಒವೆಲ್ ಮೈದನದಲ್ಲಿ ಶತಕಗಳನ್ನು ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕೇರಂ ಸ್ಪಿನ್ನರ್ ಆರ್.ಅಶ್ವಿನ್‍ಗೆ ಸಿಗುತ್ತಾ ಅವಕಾಶ ?
ಕಳೆದ ವರ್ಷ ಆಂಗ್ಲರ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಕೇರಂ ಸ್ಪಿನ್ನರ್ ಆರ್.ಅಶ್ವಿನ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನಪಡೆಯುವಲ್ಲಿ ವಿಫಲರಾಗಿದ್ದರು. ಅಂದಿನ ಕೋಚ್ ರವಿ ಶಾಸ್ತ್ರಿ, ವಿರಾಟ್ ಕೊಹ್ಲಿ ಆಲ್ರೌಂಡರ್ ಜಡೇಜಾಗೆ ಮಣೆ ಹಾಕಿದ್ದರು.
ಇದೀಗ ಆರ್.ಅಶ್ವಿನ್ ಕೊರೋನಾದಿಂದ ಚೇತರಿಸಿಕೊಂಡು ಆಂಗ್ಲರ ನಾಡಿಗೆ ಪ್ರಯಾಣ ಬೆಳೆಸಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ಲಿಸಿಸ್ಟೆರ್‍ಶೈರ್ ವಿರುದ್ಧ ಆಡಿ 2 ವಿಕೆಟ್ ಪಡೆದು ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಮೊನ್ನೆ ಮುಕ್ತಾಯವಾದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಎಡ್ಜ್‍ಬಾಸ್ಟನ್ ಅಂಗಳ ಸ್ಪಿನ್ನರ್‍ಗಳಿಗೆ ನೆರೆವು ನೀಡಿತ್ತು.ಆಡುವ ಹನ್ನೊಂದರ ಬಳಗದಲ್ಲಿ ಅಶ್ವಿನ್‍ಗೆ ಅವಕಾಶ ಸಿಗುತ್ತಾ ಎಂಬುದು ಕುತೂಹಲ ಮೂಡಿಸಿದೆ.
ತಂಡದ ಮೂರನೆ ವೇಗಿ ಯಾರು ?
ನಾಯಕ ಜಸಪ್ರೀತ್ ಬುಮ್ರಾ ಮತ್ತು ವೇಗಿ ಮೊಹ್ಮದ್ ಶಮಿ ಲಿಸಿಸ್ಟರ್‍ಶೈರ್ ವಿರುದ್ಧ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಮೂರನೆ ಬೌಲರ್‍ರಾಗಿ ಡೆಲ್ಲಿ ವೇಗಿ ಉಮೇಶ್ ಯಾದವ್ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಕಳೆದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ವೇಗಿ ಉಮೇಶ್ ಯಾದವ್ ತಮ್ಮ ಘಾತಕ ವೇಗದ ಮೂಲಕ ಆಂಗ್ಲ ಬ್ಯಾಟರ್‍ಗಳನ್ನು ನಡುಗಿಸಿದ್ದರು. ಇದೀಗ ಮತ್ತೊಮ್ಮೆ ಇಂಗ್ಲೆಂಡ್ ಬ್ಯಾಟಿಂಗ್ ವಿಭಾಗವನ್ನು ಧ್ವಂಸ ಮಾಡಲು ಈ ಡೆಲ್ಲಿ ವೇಗಿ ಸಜ್ಜಾಗುತ್ತಿದ್ದಾರೆ.