ನಟ ಸುದೀಪ್ ಸದ್ಯ ‘ವಿಕ್ರಾಂತ್ ರೋಣ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಬ್ಯೂಸಿಯಾಗಿದ್ದಾರೆ. ಇದರ ನಡುವೆ ವಿವಾದ ಒಂದು ಸೃಷ್ಟಿಯಾಗಿದೆ.
ನಟ ಸುದೀಪ್ ಬಗ್ಗೆ ವಿಡಿಯೋ ಒಂದು ಹರಿದಾಡುತ್ತಿದ್ದು, ಕಿಚ್ಚನ ಬಗ್ಗೆ ಅನಾಮಿಕ ವ್ಯಕ್ತಿ ಒಬ್ಬ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ.
ಸುದೀಪ್ ರವರು ನೀಡಿದ ಖಾಸಗಿ ಜಾಹೀರಾತಿನಿಂದಾಗಿ ಯುವಕನೊಬ್ಬ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಇದರ ಕುರಿತು ಸ್ಯಾಂಡಲ್ ವುಡ್ ನ ನಿರ್ದೇಶಕ ನಂದ ಕಿಶೋರ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಕಲಾವಿದರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದಿದ್ದಾರೆ. ಕನ್ನಡ ಕಲಾಭಿಮಾನಿಗಳೇ ನಮ್ಮ ತಂದೆ ತಾಯಿ. ಇಲ್ಲಿ ಸುದೀಪ್, ಪುನೀತ್ ರಾಜಕುಮಾರ್ ಸೇರಿದಂತೆ ಇತರ ಧೀಮಂತ ನಟರು ತಮ್ಮದೇ ಚೌಕಟ್ಟಿನಲ್ಲಿ ಸಹಾಯ ಮಾಡಿದ್ದಾರೆ. ಕೆಲವರು ಅಭಿಮಾನಿಗಳನ್ನೇ ದೇವರೆಂದು ತಲೆಯ ಮೇಲೆ ಹೊತ್ತುಕೊಂಡು ಮೆರೆದವರು ಇದ್ದಾರೆ. ಸುದೀಪ್ ಅವರಿಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಅಂತ ನಿನ್ನಿಂದ ಸಾಬೀತು ಮಾಡಲು ಸಾಧ್ಯಾನಾ? ಈ ಬಗ್ಗೆ ಅವರ ಮನೆಯವರು ದೂರು ಕೊಟ್ಟಿದ್ದಾರೆ? ನಿನ್ನ ಬಳಿ ಸಾಕ್ಷಿ ಆಧಾರವಿದ್ದರೆ ಕಾನೂನು ಬದ್ಧವಾಗಿ ಕೋರ್ಟ್ನಲ್ಲಿ ಹೋರಾಡು. ಅಥವಾ ಕನ್ನಡ ಚಲನಚಿತ್ರ ಮಂಡಳಿಯಲ್ಲಿ ದೂರು ಕೊಡು. ಅದನ್ನು ಬಿಟ್ಟು ಹಾದಿ ಬೀದಿಯಲ್ಲಿ ನಿಂತು ಹೀಗೆ ಮಾತನಾಡಬಾರದು. ಕನ್ನಡ ಮೇರು ನಟರಿಗೆ, ಕಲಾಭಿಮಾನಿಗಳ ಬಗ್ಗೆ ಹೀನ ಪದ ಬಳಸುವುದರಿಂದಲೇ ಗೊತ್ತಾಗುತ್ತೆ ನಿನ್ನ ಸಂಸ್ಕೃತಿ. ನಿನ್ನ ಪ್ರಚಾರಕ್ಕಾಗಿ ಸುದೀಪ್ ಹೆಸರು ಬಳಸಿಕೊಳ್ಳುತ್ತಿದ್ದೀಯಾ? ನೀನು ನಪುಂಸಕ ಅಲ್ಲದೇ ಇದ್ದಿದ್ರೆ ಫೋನ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿರಲಿಲ್ಲ ಎಂದು ನಂದ ಕಿಶೋರ್ ಆ ವ್ಯಕ್ತಿಯ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.