ಬೆಂಗಳೂರು: ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸಲು ಬಿಜೆಪಿಯಿಂದ ಸಾಧ್ಯವಾಗೋದಿಲ್ಲ, ರಾಜ್ಯದಲ್ಲಿ ಮಂಗನಾಟವಾಡುತ್ತಿರೋ ಬಿಜೆಪಿ ಪರಿಸ್ಥಿತಿ ನೆನಪಿಸಿಕೊಂಡರೆ ಮರುಕವುಂಟಾಗುತ್ತೆ ಅಂತ ಕಾಂಗ್ರೆಸ್ ಶಾಸಕ ಎಸ್.ಆರ್ ಪಾಟೀಲ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಎಸ್.ಆರ್ ಪಾಟೀಲ್, ಆಪರೇಷನ್ ಕಮಲ ಮೂಲಕ ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿ ಅಧಿಕಾರಕ್ಕೆ ಬರಲು ಬಿಜೆಪಿ ಯತ್ನಿಸುತ್ತಿದೆ ಇದರಿಂದ ಅವರ ಪರಿಸ್ಥಿತಿಯೇ ನೆಟ್ಟಗಾಗೋದಿಲ್ಲ. ಅವರಿಂದ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸಲು ಸಾಧ್ಯವಾಗದೇ ರಾಜ್ಯ ಅಭಿವೃದ್ದಿ ಕಾಣೋದಿಲ್ಲ ಅಂತ ಹೇಳಿದ್ರು.
ಇನ್ನು ಅತೃಪ್ತ ಶಾಸಕರ ಅನರ್ಹತೆ ವಿಚಾರ ಸ್ಪೀಕರ್ ಅಂಗಳದಲ್ಲಿದ್ದು ಅವರ ನಿರ್ಧಾರವೇ ಅಂತಿಮ ಅಂತ ಹೇಳಿದ್ರು. ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಕುರಿತಾಗಿ ಮಾತನಾಡಿದ ಪಾಟೀಲ್, ಬಿಜೆಪಿ ಪರಿಸ್ಥಿತಿ ನೆನೆಪಿಸಿಕೊಂಡರೆ ಮರುಕವುಂಟಾಗುತ್ತೆ. ವಿಶ್ವಾಸಮತಕ್ಕೂ ಮುನ್ನವೇ ಯಡಿಯೂರಪ್ಪ ಪ್ರಮಾಣವಚನಕ್ಕೆ ಸಿದ್ಧತೆ ನಡೆಸಿದ್ರು. ಹೀಗಾಗಿ ಬಹುಮತ ಸಾಬೀತುಪಡಿಸೋ ಮುನ್ನವೇ ಅಧಿಕಾರದ ದಾಹದಿಂದ ಯಡಿಯೂರಪ್ಪ ಕೋಟು ಸೂಟು ಸಿದ್ಧಮಾಡಿಟ್ಟುಕೊಂಡಿದ್ದರು. ಆದರೆ ಈ ವರೆಗೂ ಅವರಿಂದ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಸಾಧ್ಯವಾಗದೆ ಮಂಗನಾಟವಾಡುತ್ತಿದ್ದಾರೆ ಅಂತ ಎಸ್.ಆರ್ ಪಾಟೀಲ್ ಲೇವಡಿ ಮಾಡಿದ್ರು.