ಬೆಂಗಳೂರು: ಮೈತ್ರಿ ಸರ್ಕಾರವನ್ನು ಬುಡಮೇಲು ಮಾಡಿದ್ದ ಅತೃಪ್ತ ಶಾಸಕರ ಮೇಲೆ ಜೆಡಿಎಸ್ ವರಿಷ್ಠ ದೇವೇಗೌಡರು ಕೊತ ಕೊತ ಕುದಿಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ನೆಮ್ಮದಿಯಿಂದಿರೋದಕ್ಕೆ ನಾನು ಬಿಡೋದಿಲ್ಲ ಅಂತ ದೇವೇಗೌಡರು ಶಪಥಗೈದಿದ್ದಾರೆ.
ಅತೃಪ್ತ ಶಾಸಕರಿಗೆ ತಕ್ಕ ಪಾಠ ಕಲಿಸೋದಕ್ಕಾಗಿ ನಾನಾ ತಂತ್ರಗಳನ್ನು ರೂಪಿಸಲು ಮುಂದಾಗಿರೋ ದೋಸ್ತಿ ಅವರ ಅನರ್ಹತೆ ಕುರಿತಾಗಿ ಸ್ಪೀಕರ್ ಗೆ ಮನವಿ ಮಾಡಿದೆ. ಆದರೆ ಒಂದೊಮ್ಮೆ ಅವರು ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ರೆ ಯಾವುದೇ ಕಾರಣಕ್ಕೂ ಗೆಲ್ಲಲೇಬಾರದೆಂಬ ಉದ್ದೇಶದಿಂದ ದೋಸ್ತಿ ಕಾರ್ಯತಂತ್ರವನ್ನೂ ರೂಪಿಸಿದೆ. ಈ ಕುರಿತಾಗಿ ಇಂದು ರಾಜರಾಜೇಶ್ವರಿನಗರ ಜೆಡಿಎಸ್ ಮುಖಂಡರ ಸಭೆ ಕರೆದಿದ್ದ ದೇವೇಗೌಡರು ಚರ್ಚೆ ನಡೆಸಿದ್ರು. ಪಕ್ಷ ಸಂಘಟನೆ ಕುರಿತಾಗಿ ನಡೆದ ಸಭೆಯಲ್ಲಿ ಮೊದಲಿಗೆ ಮೈತ್ರಿ ಕುರಿತಾಗಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ರು. ಒಂದು ವೇಳೆ ಉಪ ಚುನಾವಣೆ ಎದುರಾದರೆ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳೋದು ಬೇಡ, ಪ್ರತ್ಯೇಕವಾಗಿ ಜೆಡಿಎಸ್ ಅಭ್ಯರ್ಥಿಯೇ ಕಣಕ್ಕಿಳಿಯಲಿ ಅಂತ ಮುಖಂಡರು ದೇವೇಗೌಡರಲ್ಲಿ ಮನವಿ ಮಾಡಿದ್ರು.
ಇದಕ್ಕೆ ಉತ್ತರಿಸಿದ ಜೆಡಿಎಸ್ ವರಿಷ್ಠ ದೇವೇಗೌಡರು, ಮೈತ್ರಿ ಕುರಿತು ಕುಮಾರಸ್ವಾಮಿ ಮತ್ತು ನಾನು ಕೂತು ತೀರ್ಮಾನಿಸುತ್ತೇವೆ. ಈ ಬಗ್ಗೆ ನೀವು ಚಿಂತೆ ಮಾಡಬೇಡಿ, ಪಕ್ಷ ಸಂಘಟನೆ ಮಾಡುವತ್ತ ಗಮನ ಹರಿಸಿ ಅಂತ ಕಿವಿ ಮಾತು ಹೇಳಿದ್ರು. ಇದೇ ವೇಳೆ ಸರ್ಕಾರ ಪತನಗೊಳ್ಳಲು ಕಾರಣಕರ್ತರಾದ ಅತೃಪ್ತ ಶಾಸಕರು ನೆಮ್ಮದಿಯಿಂದ ಇರಲು ನಾನು ಬಿಡೋದಿಲ್ಲ. ಅವರಿಗೆ ನಾನು ತಕ್ಕ ಪಾಠ ಕಲಿಸ್ತೇನೆ ಅಂತ ದೇವೇಗೌಡರು ಶಪಥಗೈದಿದ್ದಾರೆ ಎನ್ನಲಾಗಿದೆ.