ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನವರಿ 3 ರಿಂದ 5 ರೊಳಗಾಗಿ ಸಂಘಟಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕ್ರೀಡಾ ಕೂಟದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಮಟ್ಟದಲ್ಲಿ ಕ್ರೀಡಾಕೂಟವನ್ನು ಡಿಸೆಂಬರ್ 24 ರಂದು ಆಯೋಜಿಸಿ ವಿಜೇತರ ಪಟ್ಟಿಯನ್ನು ಡಿಸೆಂಬರ್ 26 ರೊಳಗಾಗಿ ಪಡೆದುಕೊಳ್ಳಿ ಇದರಿಂದ ಜನವರಿ ಪ್ರಾರಂಭದಲ್ಲಿ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ಆಯೋಜಿಸಬಹುದು ಎಂದರು.
ಈ ಬಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ಪಿ.ಇ.ಎಸ್ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಸಿ. ಕ್ರೀಡಾಂಗಣದಲ್ಲಿ ಬೇಕಿರುವ ಕುಡಿಯುವ ನೀರು, ವೈದ್ಯಕೀಯ ವ್ಯವಸ್ಥೆ, ಪೊಲೀಸ್ ಬಂದೋಬಸ್ತ್ ಗಳ ವ್ಯವಸ್ಥೆ, ಶಿಕ್ಷಣ ಇಲಾಖೆಯಿಂದ ದೈಹಿಕ ಶಿಕ್ಷಕರನ್ನು ನಿಯೋಜಿಸಿಕೊಳ್ಳಿ. ಕಲಾಮಂದಿರದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲು ಮೊದಲೆ ಕಲಾಮಂದಿರವನ್ನು ಕಾಯ್ದಿರಿಸಿಕೊಳ್ಳಿ ಎಂದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಇಚ್ಛಿಸುವವರನ್ನು ಕಳುಹಿಸಿಕೊಡಿ. ಕ್ರೀಡಾ ಕೂಟದಲ್ಲಿ ಭಾಗವಹಿಸುವವರಿಗೆ ಹಾಜರಾತಿ ಪತ್ರ ನೀಡಲಾಗುವುದು. ಕ್ರೀಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಭಾಗವಹಿಸಲಿ ಎಂದರು.
ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕೆಲವು ವಿಭಾಗಗಳಲ್ಲಿ ಸ್ಪರ್ಧಿಗಳೇ ಇರುವುದಿಲ್ಲ. ಕನಿಷ್ಟ 3 ಸ್ಪರ್ಧಿಗಳು ಇದ್ದರೆ ಮಾತ್ರ ಆ ವಿಭಾಗದಲ್ಲಿ ಸ್ಪರ್ಧೆ ನಡೆಸಿ ಒಂದು ಬಹುಮಾನ ನೀಡಿ. ಕನಿಷ್ಠ 3 ಸ್ಪರ್ಧಿಗಳು ಇಲ್ಲದಿದ್ದಾರೆ ಆ ವಿಭಾಗವನ್ನು ರದ್ದು ಮಾಡಿ ಎಂದರು.
ಈ ಜ್ಯೂಸ್ ಕುಡಿದ್ರೆ, ನಿಮ್ಮ ತ್ವಚೆ ಹೊಳಪಿನಿಂದ ಕೂಡಿರುತ್ತದೆ..
ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾದ ಕೆಲವು ಸರ್ಕಾರಿ ನೌಕರರು ರಾಜ್ಯಮಟ್ಟದಲ್ಲಿ ನೊಂದಣಿ ಮಾಡಿಕೊಂಡು ಹಾಜರಾತಿ ಪಡೆಯುತ್ತಾರೆ ಆದರೆ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಎಂಬ ದೂರುಗಳು ಕೇಳಿಬರುತ್ತದೆ. ಇಂತಹ ಪ್ರಕರಣಗಳು ಕಂಡುಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭುಗೌಡ ಅವರು ಮಾತನಾಡಿ ನೌಕರರ ಸಂಘದಿಂದ ನಡೆಸಲಾಗುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ; ಹೆಚ್.ಎಲ್ ನಾಗರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ತಮ್ಮಣ್ಣ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಂಜುನಾಥ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉದಯ್ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.