Sunday, October 20, 2024

Latest Posts

ಹಾಸನದಲ್ಲಿ ಖತರ್ನಾಕ್ ಸರಣಿ ಕಳ್ಳತನ ಮಾಡಿದವನ ಬಂಧನ..

- Advertisement -

ಹಾಸನ : ಏಳು ಕಡೆಗಳಲ್ಲಿ ಸರಣಿ ಕಳ್ಳತನ ನಡೆಸಿ 10 ಲಕ್ಷರೂ. ಮೌಲ್ಯದ ಚಿನ್ನಾಭರಣ, ಬೈಕ್‌ಗಳನ್ನು ಕಳವು ಮಾಡಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದ ಸತೀಶ್ (40) ಬಂಧಿತ ಆರೋಪಿ.

ಪ್ರಕರಣ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರೋಪಿಯ ವಿರುದ್ಧ ಚನ್ನರಾಯಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 5, ಹಾಸನ ಪೆನ್‌ಷನ್ ಮೊಹಲ್ಲಾ, ತಿಪಟೂರು ಠಾಣೆ ವ್ಯಾಪ್ತಿಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಈತನ ಮೇಲೆ ಈ ಹಿಂದೆ 8 ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.

ಫೆ.12 ರಂದು ಚನ್ನರಾಯಪಟ್ಟಣದ ಮೈಲಾರಲಿಂಗ ಬೀದಿಯ ಬಿ.ಎಸ್.ಅಭಿಜಿತ್ ಅವರ ಬೈಕ್ ಕಳುವಾಗಿರುವ ಬಗ್ಗೆ ಪ್ರಕರಣ ದಾಖಲಿಸಿದ್ದು, ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸಿದ ವೇಳೆ ಆರೋಪಿ ಸತೀಶ್ ಸಿಕ್ಕಿಬಿದ್ದಿದ್ದ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಚನ್ನರಾಯಪಟ್ಟಣದ ಕುವೆಂಪು ನಗರದ ರವಿನಾಯ್ಕ, ನಾಗೇಶ್, ಕೋಟೆ ಬೀದಿ ನಿವಾಸಿ ಆನಂದ, ರಾಮೇಶ್ವರ ಬಡಾವಣೆ ನಿವಾಸಿ ಮುರುಳಿ ಹಾಗು ಹಾಸನದ ವಿದ್ಯುತ್ ನಗರದ ರಂಗನಾಥ್ ಅವರ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳುವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಅಲ್ಲದೆ ಚನ್ನರಾಯಪಟ್ಟಣ ತಿಪಟೂರು ಭಾಗದಲ್ಲಿ 3 ಬೈಕ್‌ಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾನೆ. ಆರೋಪಿಯಿಂದ 160 ಗ್ರಾಂ. ತೂಕದ 8 ಲಕ್ಷರೂ. ಮೌಲ್ಯದ ಚಿನ್ನಾಭರಣ, 1 ಲಕ್ಷರೂ. ಮೌಲ್ಯದ 2 ಕೆ.ಜಿ. ಬೆಳ್ಳಿ, ಮೂರು ಬೈಕ್‌ಗಳು ಸೇರಿ ಒಟ್ಟು 10 ಲಕ್ಷರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಚನ್ನರಾಯಪಟ್ಟಣ ಡಿವೈಎಸ್‌ಪಿ ರವಿಪ್ರಸಾದ್, ಪಿಎಸ್‌ಐ ರವಿ, ಎಸ್.ಸುಪ್ರೀತ್ ಮತ್ತವರ ತಂಡವನ್ನು ಶ್ಲಾಘಿಸಿ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

- Advertisement -

Latest Posts

Don't Miss