ಚಿತ್ರದುರ್ಗ: ಮೊಳಕಾಲ್ಮೂರು ಟಿಕೇಟ್ ಸಿಗದ ಕಾರಣ, ಬಂಡಾಯವೆದ್ದಿರುವ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿ ಯೋಗೇಶ್ ಬಾಬು, ದೇವಸ್ಥಾನಕ್ಕೆ ಭೇಟಿ ನೀಡಿ, ಅಧಿಕೃತ ಪ್ರಚಾರ ಆರಂಭಿಸಿದ್ದಾರೆ.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದು ಕೂಡ್ಲಗಿ ಮಾಜಿ ಶಾಸಕ ಎನ್. ಗೋಪಾಲಕೃಷ್ಣ ಟಿಕೇಟ್ ಪಡೆದುಕೊಂಡಿದ್ದಾರೆ. ಈ ಕಾರಣಕ್ಕೆ ರೆಬೆಲ್ ಆದ ಯೋಗೇಶ್ ಬಾಬು, ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ್ದಾರೆ. ಹಾಗಾಗಿ ನಾಯಕನಹಟ್ಟಿಯ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕವೇ ಪ್ರಚಾರಕ್ಕೆ ಮುಂದಾದರು.
ಈ ವೇಳೆ ಮಾತನಾಡಿದ ಯೋಗೇಶ್ ಬಾಬು, ದೇವರ ಆಶೀರ್ವಾದ ಪಡೆದು ಪ್ರಚಾರಕ್ಕೆ ಹೊರಟಿದ್ದೇನೆ. ನಮ್ಮ ಕ್ಷೇತ್ರಕ್ಕೆ ಹೋಗಿ, ಮುಖಂಡರ ,ಕಾರ್ಯಕರ್ತರ ಅಭಿಪ್ರಾಯವನ್ನು ತಿಳಿದುಕೊಂಡು, ಸಭೆಯನ್ನು ಮಾಡಿ, ನಮ್ಮ ಮುಂದಿನ ನಿರ್ಧಾರವನ್ನ ಪ್ರಕಟ ಮಾಡುತ್ತೇವೆ.
ಸುಮಾರು 20 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರೀಯ ಕಾರ್ಯಕರ್ತನಾಗಿ ದುಡಿಯುತ್ತ ಬಂದಿದ್ದೇನೆ. ಸೋತಾಗಲೂ 5 ವರ್ಷ ಸಚಿವ ಶ್ರೀರಾಮುಲು ವಿರುದ್ಧ ಪಕ್ಷ ಸಂಘಟನೆ ಮಾಡಿದ್ದೇನೆ. ಅನೇಕ ಹೋರಾಟ, ಸಾಮಾಜಿಕ ಕೆಲಸಗಳನ್ನ ಮಾಡಿದ್ದೇನೆ. ಆದರೂ ನನಗೆ ಅನ್ಯಾಯವಾಗಿದೆ. ಅದನ್ನ ನಾನು ಇಲ್ಲಿನ ಮತದಾರರಿಗೆ ಹೇಳುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಬಿಜೆಪಿಯಿಂದ ಕಾಂಗ್ರೆಸ್‌ಸಿಗೆ ಬಂದು ಟಿಕೇಟ್ ಗಿಟ್ಟಿಸಿಕೊಂಡ ಗೋಪಾಲಕೃಷ್ಣ, ನಿನ್ನೆ ಯೋಗಿಶ್ ಬಾಬು ಬಗ್ಗೆ ಮಾತನಾಡಿದ್ದು, ಅವನು ನಮ್ಮ ಹುಡುಗ. ನಮ್ಮೊಂದಿಗಿದ್ದು, ನಮಗೆ ಬೆಂಬಲಿಸುತ್ತಾನೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಯೋಗಿಶ್ ಬಾಬು, ಯಾರ್ಯಾರಿಗೆ, ಯಾವಾಗ್ಯಾವಾಗ ಏನೇನ್ ಬೇಕೋ ಅದನ್ನ ಹೇಳ್ತಾರೆ. ಆದ್ರೆ ಇದ್ಕಕೂ ಮುನ್ನ ಏನು ಹೇಳಿದ್ದರು..? ಎಂದು ಯೋಗಿಶ್ ಮರುಪ್ರಶ್ನಿಸಿದ್ದಾರೆ. ಅಲ್ಲದೇ, ನನ್ನನ್ನು ಈ ಕ್ಷೇತ್ರದ ಜನ ಕೈ ಬಿಡುವುದಿಲ್ಲ. ನಾನು ಅವರ ಮಧ್ಯೆಯೇ ಇದ್ದವನು. ಹಗಲು ರಾತ್ರಿ ಅವರಿಗಾಗಿ ಶ್ರಮಿಸಿದ್ದೇನೆ. ಮಧ್ಯರಾತ್ರಿ ಕೂಡ ಕರೆಗಳನ್ನ ಸ್ವೀಕರಿಸಿ, ಸಮಸ್ಯೆ ಆಲಿಸಿದ್ದೇನೆ. ಅಪಘಾತವಾದಾಗ, ಆಸ್ಪತ್ರೆ, ಪೊಲೀಸ್ ಠಾಣೆಗೆ ಮಧ್ಯರಾತ್ರಿ ಓಡಿದ್ದೇನೆ. ಹಾಗಾಗಿ ಈ ಕ್ಷೇತ್ರದ ಮತದಾರರು ನನ್ನ ಕೈ ಬಿಡುವುದಿಲ್ಲವೆಂಬ ನಂಬಿಕೆ ನನಗಿದೆ ಎಂದು ಯೋಗಿಶ್ ಬಾಬು ಹೇಳಿದ್ದಾರೆ.
ಕೋಲಾರದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್: ಆನಂದ್ ರೆಡ್ಡಿ ಜೆಡಿಎಸ್‌ಗೆ ಸೇರ್ಪಡೆ
ಮಂಡ್ಯ ಎಲೆಕ್ಷನ್‌ಗೆ ಭರದ ಸಿದ್ಧತೆ: ಹೆಸರು ಸೇರ್ಪಡೆಗೆ ಏಪ್ರಿಲ್ 11 ಕೊನೆ ದಿನ