ಕೋಲಾರ: ಭರ್ಜರಿ ಬಹುಮತ ಗಳಿಸಿರುವ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದು ಸಿಎಂ ಗದ್ದುಗೆಗೆ ಪ್ರಬಲ ಪೈಪೋಟಿ ಎದುರಾಗಿತ್ತು. ಈ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಫೈನಲ್ ಎಂಬ ಮಾತು ಕೇಳಿಬಂದ ಹಿನ್ನೆಲೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿರುವುದಕ್ಕೆ ಕೋಲಾರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ನಗರ ದೇವತೆ ಶ್ರೀ ಕೋಲಾರಮ್ಮನ ದೇವಾಲಯದಲ್ಲಿ 108 ತೆಂಗಿನಕಾಯಿ ಹೊಡೆಯುವ ಮುಖಾಂತರ ಹರಕೆ ತೀರಿಸಿದ್ದಾರೆ.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿ.ಸೋಮಶೇಖರ್, ಅಹಿಂದ ವರ್ಗಗಳ ಏಳಿಗೆಗೆ ಮತ್ತೊಮ್ಮೆ ಸಿದ್ದರಾಮಯ್ಯ ಅವರು ಸಿಎಂ ಆಗಲೇಬೇಕು. ಈ ಹಿಂದೆ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದಾಗಲೇ ಇವರು ಸಿಎಂ ಆದರೆ 108 ತೆಂಗಿನಕಾಯಿ ಹೊಡೆಯುತ್ತೇವೆಂದು ಹರಕೆ ಹೊತ್ತುಕೊಂಡಿದ್ದೆವು. ಅದರಂತೆ ಈಗ ಸಿದ್ದರಾಮಯ್ಯ ಸಿಎಂ ಆಗುತ್ತಿರುವುದು ನಮಗೆ ಸಂತೋಷ ತಂದಿದ್ದು ಹರಕೆ ತೀರಿಸುತ್ತಿದ್ದೇವೆ ಎಂದರು. ಕೋಲಾರ ಜಿಲ್ಲೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಿದ ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ರವರಿಗೆ ಮಂತ್ರಿ ಸ್ಥಾನ ನೀಡಿ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಒತ್ತಾಯ ಮಾಡಿದರು.
ಮಾಜಿ ನಗರಸಭಾ ಅಧ್ಯಕ್ಷ ಪ್ರಕಾಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 135 ಸೀಟು ಗೆಲ್ಲುವ ಮೂಲಕ ಜಯಭೇರಿ ಭಾರಿಸಿದೆ. ಈ ಮೂಲಕ ಸ್ಪಷ್ಟ ಸರ್ಕಾರ ರಚನೆಗೂ ಅವಕಾಶ ದೊರೆತಿದೆ. ಇದಕ್ಕೆಲ್ಲ ಕಾರಣಕರ್ತರಾಗಿರುವ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ಸಿಗುತ್ತಿದೆ. ಸಿದ್ದರಾಮಯ್ಯನವರು ಎಲ್ಲಾ ವರ್ಗದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು 5 ವರ್ಷ ಯಾವುದೇ ಕಪ್ಪುಚುಕ್ಕೆ ಇಲ್ಲದೆ ಆಳ್ವಿಕೆ ನಡೆಸಿದ್ದಾರೆ. ಸರ್ವ ಜನಾಂಗದ ಶಾಂತಿಯ ತೋಟದಂತೆ ಕ್ಯಾಬಿನೆಟ್ ರಚನೆ ಮಾಡಿದ್ದರು. ಈಗಾಗಲೇ 13 ಬಜೆಟ್ ಮಂಡಿಸಿದ್ದಾರೆ, ಸಿದ್ದರಾಮಯ್ಯನವರು ನಮ್ಮೆಲ್ಲರ ಹಿರಿಯಣ್ಣ. ಈಗ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗುತ್ತಿರುವುದು ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಇದೇ ವೇಳೆ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು ಎಂದು ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಂಚೆ ಅಶ್ವಥ್, ಪ್ರಸಾದ್ ಬಾಬು, ಅನಂತರಾಮ್, ಕೈಲಾಸ್, ಮೋಹನ್ ಬಾಬು, ಚಂದ್ರಮೌಳಿ, ಉಮೇಶ್ ಹಾಗೂ ಮತ್ತಿತರರು ಹಾಜರಿದ್ದರು.
‘ಮುಸ್ಲಿಂ ಬಂಧುಗಳನ್ನು ಅತ್ಯಂತ ಹೆಚ್ಚು ಪ್ರೀತಿಸೊ ವ್ಯಕ್ತಿ ಪ್ರೀತಂಗೌಡ’
‘ಒಂದು ಕ್ಷೇತ್ರದಲ್ಲಾದರೂ ಬಿಜೆಪಿ ಗೆಲ್ಲಿಸು ಎಂದು ಚಾಲೆಂಜ್ ಹಾಕಿದ್ದೆ, ಅವರಿಗೆ ನಮ್ಮ ನೋವೇ ಶಾಪವಾಗಿ ತಟ್ಟಿದೆ’
ಸಿದ್ದರಾಮಯ್ಯರಿಂದ ಹೈಕಮಾಂಡ್‍ಗೆ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ ವಿಶ್ಲೇಷಣೆ