ಇವತ್ತು ನಾವು ಹವ್ಯಕ ಶೈಲಿಯ ರಾಯ್ತಾ ಅಂದ್ರೆ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.

ಊಟದ ಜೊತೆ ಈ ರಾಯ್ತಾ ಒಳ್ಳೆಯ ಕಾಂಬಿನೇಷನ್ ಆಗಿರುತ್ತದೆ. ಪೋಷಕಾಂಶಗಳಿಂದ ಭರಪೂರವಾದ ಈ ರಾಯ್ತಾ ದೇಹವನ್ನ ತಂಪು ಮಾಡುವಲ್ಲಿ ಸಹಕಾರಿಯಾಗಿದೆ. ಹಾಗಾದ್ರೆ ಬನ್ನಿ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ.
ಒಂದು ಕಪ್ ಮೊಸರು, ಒಂದು ಸೌತೇಕಾಯಿ, ಅರ್ಧ ಕಪ್ ಕೊಬ್ಬರಿ ತುರಿ, ಚಿಕ್ಕ ತುಂಡು ಹಸಿ ಶುಂಠಿ, ಒಗ್ಗರಣೆಗೆ, ಕೊಂಚ ಎಣ್ಣೆ, ಚಿಟಿಕೆ ಸಾಸಿವೆ, ಜೀರಿಗೆ, ಒಂದು ಒಣ ಮೆಣಸು, 5-6 ಎಸಳು ಕರಿಬೇವಿನ ಎಲೆ, ಸ್ವಲ್ಪ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಸೌತೇಕಾಯಿಯನ್ನ ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಒಂದು ಬೌಲ್‌ಗೆ ಹಾಕಿ. ಮಿಕ್ಸಿ ಜಾರ್‌ಗೆ ಮೊಸರು ಕಾಯಿ ತುರಿ, ಚಿಕ್ಕ ತುಂಡು ಹಸಿ ಶುಂಠಿ ಹಾಕಿ ರುಬ್ಬಿ, ಸೌತೆಕಾಯಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಒಗ್ಗರಣೆ ಹಾಕಿ, ಉಪ್ಪು, ಕೊತ್ತೊಂಬರಿ ಸೊಪ್ಪು ಸೇರಿಸಿದರೆ ಹವ್ಯಕ ಶೈಲಿಯ ರಾಯ್ತಾ ರೆಡಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ


