ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲೇ ಚೆಸ್ಕಾಂ ಸಿಬ್ಬಂದಿಯ ಗೂಂಡಾವರ್ತನೆ ಬೆಳಕಿಗೆ ಬಂದಿದೆ. ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದಲ್ಲಿ ವಿದ್ಯುತ್ ಬಿಲ್ ಪಾವತಿಸಿಲ್ಲವೆಂಬ ಕಾರಣಕ್ಕೆ ಅಂಧ ವೃದ್ಧೆಯ ಮೇಲೆ ಚೆಸ್ಕಾಂ ಸಿಬ್ಬಂದಿ ದೌರ್ಜನ್ಯ ಎಸಗಿದ ಘಟನೆ ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ.
ಮಹದೇವಮ್ಮ ಎಂಬ 80 ವರ್ಷದ ಅಂಧ ವೃದ್ಧೆಯ ಮನೆಗೆ ಚೆಸ್ಕಾಂ ಅಧಿಕಾರಿಗಳು ಬಂದು ₹5,000 ವಿದ್ಯುತ್ ಬಿಲ್ ಪಾವತಿಸಲು ಒತ್ತಾಯಿಸಿದ್ದಾರೆ. ಆದರೆ, ಅವರು ಭಾಗ್ಯಜ್ಯೋತಿ ಯೋಜನೆಯ ಫಲಾನುಭವಿಯಾಗಿದ್ದು, ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದೇನೆ ಎಂದು ತಿಳಿಸಿದರೂ ಸಿಬ್ಬಂದಿ ಕೇಳಿಲ್ಲ. ಬಿಲ್ ತಪ್ಪಾಗಿ ಬಂದಿದ್ದು, ತಾವು ಪಾವತಿಸಲು ಅಸಮರ್ಥರಿದ್ದೇನೆ ಎಂದು ಮಹದೇವಮ್ಮ ಸ್ಪಷ್ಟಪಡಿಸಿದರೂ, ಅಧಿಕಾರಿಗಳು ಬಲವಂತವಾಗಿ ಮೀಟರ್ ಮತ್ತು ಫ್ಯೂಸ್ ತೆಗೆಯಲು ಮುಂದಾಗಿದ್ದಾರೆ.
ಈ ವೇಳೆ ವೃದ್ಧೆ ವಿರೋಧ ವ್ಯಕ್ತಪಡಿಸಿದಾಗ ಚೆಸ್ಕಾಂ ಸಿಬ್ಬಂದಿ ಕೋಪಗೊಂಡು ಅವರನ್ನು ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಂಧ ವೃದ್ಧೆ ಕೆಳಗೆ ಬಿದ್ದು ಗಾಯಗೊಂಡಿದ್ದು, ತಕ್ಷಣ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆ ಬಳಿಕ ಅವರನ್ನು ಮನೆಗೆ ಡಿಸ್ಚಾರ್ಜ್ ಮಾಡಲಾಗಿದೆ.
ಈ ಘಟನೆ ನಂತರ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಭಾಗ್ಯಜ್ಯೋತಿ ಯೋಜನೆ ಅಂಧ ವೃದ್ಧೆಯಂತಹ ಬಡ ಜನರಿಗಾಗಿ. ಆದರೆ ಅದೇ ಯೋಜನೆಯ ಪ್ರಯೋಜನ ಪಡೆಯುವವರನ್ನು ಅಧಿಕಾರಿಗಳು ಕಿರುಕುಳ ನೀಡುತ್ತಿರುವುದು ವಿಷಾದನೀಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚೆಸ್ಕಾಂ ಅಧಿಕಾರಿಗಳ ದೌರ್ಜನ್ಯ ವಿಷಯ ಇದೀಗ ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಬೆಳಕಿಗೆ ಬಂದಿರುವುದರಿಂದ ರಾಜಕೀಯ ತಿರುವು ಪಡೆಯುವ ಸಾಧ್ಯತೆಯೂ ಇದೆ. ವೃದ್ಧೆಯ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ಮೈಸೂರು ಚೆಸ್ಕಾಂ ಕಚೇರಿ ವರದಿ ಕೋರಿದ್ದು, ತನಿಖೆ ನಡೆಸಿ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ : ಲಾವಣ್ಯ ಅನಿಗೋಳ

