ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ತಿಂಗಳಲ್ಲಿ ಖಾತಾ: ಉದ್ಯಮಿಗಳ ನಿಯೋಗಕ್ಕೆ ಎಂ.ಬಿ.ಪಾಟೀಲ್‌ ಭರವಸೆ

Political News: ಬೆಳಗಾವಿ: ಇಲ್ಲಿನ‌ ಹೊರವಲಯದಲ್ಲಿ ಇರುವ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಇದುವರೆಗೂ ಖಾತಾ ಪಡೆಯದೆ ಇರುವ ಉದ್ಯಮಿಗಳು ಅರ್ಜಿ ಸಲ್ಲಿಸಿದರೆ, ಮುಂದಿನ 31 ದಿನಗಳಲ್ಲಿ ಖಾತಾ ಮಾಡಿಸಿ ಕೊಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಗುರುವಾರ ಇಲ್ಲಿನ ಸುವರ್ಣಸೌಧದ ಕಮಿಟಿ ರೂಮ್‌ನಲ್ಲಿ ಉತ್ತರ ಬೆಳಗಾವಿ ಕೈಗಾರಿಕಾ ಒಕ್ಕೂಟದ ಪ್ರತಿನಿಧಿಗಳ ಜತೆ ವಿವಿಧ ಸಮಸ್ಯೆಗಳನ್ನು ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 233 ಉದ್ಯಮಗಳು ಇವೆ. ಇವುಗಳ ಪೈಕಿ 202ಕ್ಕೆ ಸೇಲ್ ಡೀಡ್ ಆಗಿದ್ದು, 131 ಉದ್ಯಮಿಗಳಿಗೆ ಮಾತ್ರ ಖಾತಾ ಸಿಕ್ಕಿದೆ. ಉಳಿದ ಉದ್ಯಮಗಳಿಗೂ ಖಾತೆ ಸೌಲಭ್ಯ ಮಾಡಿಕೊಡಬೇಕು ಎಂದು ಉದ್ಯಮಿಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಚಿವರು ಈ ಭರವಸೆ ನೀಡಿದರು.

ಇದಕ್ಕೆ ಸ್ಪಂದಿಸಿದ ಸಚಿವರು, ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಕೆಲವು ಸಮಸ್ಯೆಗಳು ಬಹುಕಾಲದಿಂದ ನನೆಗುದಿಗೆ ಬಿದ್ದಿವೆ. ಖಾತೆ ಸೌಲಭ್ಯ ಗ್ರಾಮ ಪಂಚಾಯಿತಿ ಮೂಲಕ ಆಗಬೇಕು. ಕೈಗಾರಿಕಾ ಬಡಾವಣೆಯಲ್ಲಿನ ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ಹಲವು ವರ್ಷಗಳಿಂದ ವಸೂಲಿ ಮಾಡಿಲ್ಲ. ಹೀಗಾಗಿ ಮಾರ್ಗದರ್ಶಿ ಬೆಲೆ ಅನ್ವಯವಾದ 2017 ರಿಂದ ಆಸ್ತಿ ತೆರಿಗೆ ವಸೂಲಿ‌ ಮಾಡಲು ತೀರ್ಮಾನಿಸಲಾಯಿತು. ಇದಕ್ಕೆ ಎಲ್ಲ ಉದ್ಯಮಿಗಳು ಒಪ್ಪಿಕೊಂಡಿದ್ದಾರೆ ಎಂದರು.

ಹೊನಗಾದಲ್ಲಿ ಇರುವ ಕ್ಯಾಂಟೀನ್ ಕಟ್ಟಡವನ್ನು ಆಡಳಿತ ಕಚೇರಿ ಆರಂಭಿಸಲು ನಿಯೋಗವು ಕೇಳಿದೆ. ಸರ್ಕಾರವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಅವರು ನುಡಿದರು. ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಅಜಿತ್ ಪಾಟೀಲ, ನಾಗೇಂದ್ರ ಇದ್ದರು.

ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ‌ ಪರ್ವೇಜ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಬೆಳಗಾವಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ, ಕೈಗಾರಿಕಾ ಇಲಾಖೆ ನಿರ್ದೇಶಕ ರಮೇಶ ಉಪಸ್ಥಿತರಿದ್ದರು.

ಹುಬ್ಬಳ್ಳಿಯಿಂದ ತಿರುಪತಿಗೆ ಪಾದಯಾತ್ರೆ ಹೊರಟ ನಾಯಿ!

ಪ್ರಮಾಣವಚನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪ್ರಮುಖ ಭರವಸೆ ಈಡೇರಿಸಿದ ಸಿಎಂ ರೇವಂತ್ ರೆಡ್ಡಿ

ಅಂಬಾರಿ ಆನೆ ಅರ್ಜುನನ ಸಮಾಧಿಗೆ ರಾಜವಂಶಸ್ಥ ಯದುವೀರ್‌ ಪೂಜೆ

About The Author