ಪ್ರತಿಯೊಬ್ಬನ ಜೀವನವೂ ಆತ ತಿನ್ನುವ ಅನ್ನದಿಂದ ನಡೆಯುತ್ತಿದೆ. ಇಂತಹ ಅನ್ನವನ್ನು ನಮಗೆ ನೀಡುತ್ತಿರುವ “ರೈತ” ನಿಜಕ್ಕೂ ಅನ್ನದಾತ. ಇಂತಹ “ರೈತ” ನಿಗೆ ನಮನ ಸಲ್ಲಿಸುವ ಸಲುವಾಗಿ ಸಂಜಯ್ ಗೌಡ ಅವರು “ರೈತ” ಎಂಬ ಹೆಸರಿನಲ್ಲೇ ಆಲ್ಬಂ ಸಾಂಗ್ ನಿರ್ಮಾಣ ಮಾಡಿದ್ದಾರೆ. ತಮ್ಮ ಅಮೋಘ ಗಾಯನದ ಮೂಲಕ ಖ್ಯಾತರಾಗಿರುವ ALL OK ಈ ಹಾಡನ್ನು ಬರೆದು, ಹಾಡಿ, ಸಂಗೀತ ನೀಡಿದ್ದಾರೆ. ಈ ಹಾಡಿನ ನಿರ್ದೇಶನವನ್ನು ಇವರೆ ಮಾಡಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ನೆರವೇರಿತು.
ರೈತರ ಮಕ್ಕಳು ಈ ಹಾಡನ್ನು ಲೋಕಾರ್ಪಣೆ ಮಾಡಿದರು. ಸಾಯಿಗೋಲ್ಡ್ ಪ್ಯಾಲೆಸ್ ನ ಶರವಣ, ಯುನೈಟೆಡ್ ಆಸ್ಪತ್ರೆಯ ಶಾಂತಕುಮಾರ್, ಅನಂತು, ನಟ ಉಪೇಂದ್ರ ಅವರ ಸಹೋದರ ಸುಧೀಂದ್ರ ಸೇರಿದಂತೆ ಅನೇಕರು ಈ ಸ ಸಮಾರಂಭಕ್ಕೆ ಆಗಮಿಸಿದ್ದರು.
ನಾವು ಮಕ್ಕಳನ್ನು ನೀನು ದೊಡ್ಡವನಾದ ಮೇಲೆ ಏನಾಗುತ್ತೀಯಾ ? ಅಂತ ಕೇಳಿದಾಗ, ಅವರು ಡಾಕ್ಟರ್, ಇಂಜಿನಿಯರ್ ಆಗುತ್ತೀನಿ ಎನ್ನುತ್ತಾರೆ ಹೊರೆತು ರೈತ ಆಗುತ್ತೀನಿ ಅನ್ನುವುದಿಲ್ಲ. ನಾನು ರೈತ ಆಗುತ್ತೀನಿ ಅನ್ನುವ ದಿನ ಬೇಗ ಬರಬೇಕು ಎಂಬುದೇ ನಮ್ಮ ಆಸೆ. ನಾನು ಹಾಗೂ ಸಂಜಯ್ ಗೌಡ ಇಬ್ಬರು ಬಾಲ್ಯ ಸ್ನೇಹಿತರು. ಹಿಂದೆ KA01 ಎಂಬ ಆಲ್ಬಂ ಸಾಂಗ್ ಮಾಡಿ ವಿದೇಶದಲ್ಲಿ ಬಿಡುಗಡೆ ಮಾಡಿದ್ದೆವು. ಈಗ ರೈತನ ಕುರಿತಾದ ಈ ಗೀತೆ ತಂದಿದ್ದೀವಿ. ಈ ವಿಷಯವನ್ನು ರಾಜಕೀಯ ವ್ಯಕ್ತಿಗಳು ಸೇರಿದಂತೆ ಅನೇಕ ಗಣ್ಯರ ಮುಂದೆ ಹೇಳಿದಾಗ ಸಂತೋಷದಿಂದ ಸಾಥ್ ನೀಡಿದರು. ಛಾಯಾಗ್ರಾಹಕ ಆಕಾಶ್ ಜೋಶಿ ಸೇರಿದಂತೆ ಎಲ್ಲಾ ತಂತ್ರಜ್ಞರ ಸಾಹಕಾರ ಅಪಾರ ಎಂದರು ALL OK.
ನನ್ನನ್ನು ಪರದೆಯ ಮೇಲೆ ತರುವ ಸಲುವಾಗಿ ಗೆಳೆಯ ALL OK ಈ ವಿಭಿನ್ನ ಹಾಡನ್ನು ಮಾಡಿದ್ದಾನೆ.. ಆದರೆ ನಾವು ಪರದೆಯ ಮೇಲೆ ಬರುವುದಕ್ಕಿಂತ ನಮಗೆ ತಿನ್ನಲು ಅನ್ನ ನೀಡುತ್ತಿರುವ ರೈತನಿಗೆ ನಮನ ಸಲ್ಲಿಸುವ ಈ “ರೈತ” ಆಲ್ಬಂ ಸಾಂಗ್ ಬಿಡುಗಡೆ ಮಾಡಲಾಗಿದೆ. ರೈತನಿಗೆ ನೋಡಿ ಪ್ರಮೋಷನ್, ಇನ್ಕ್ರಿಮೆಂಟ್, ರಿಟೈರ್ ಮೆಂಟ್ ಏನು ಇಲ್ಲ. ಯಾವಾಗಲೂ ದುಡಿಮೆಯೇ ಆತನ ಜೀವನ. ನಮ್ಮ ಮಕ್ಕಳು ರಜೆ ದಿನಗಳಲ್ಲಿ ಅಲ್ಲಿಇಲ್ಲಿ ಕರೆದುಕೊಂಡು ಹೋಗು ಎನ್ನುವ ಬದಲು ಹೊಲ,ಗದ್ದೆಗಳಿಗೆ ಕರೆದುಕೊಂಡು ಹೋಗು ನಾನು ನೋಡಬೇಕು ಎನ್ನುವಂತಾಗಲಿ ಎಂದು ಸಂಜಯ್ ಗೌಡ ಆಶಿಸಿದರು. ಈ ಹಾಡಿನಲ್ಲಿ ನನ್ನೊಂದಿಗೆ ಸೋನು ಗೌಡ ಅಭಿನಯಿಸಿದ್ದಾರೆ. ತಂತ್ರಜ್ಞರ ಕೆಲಸ ಉತ್ತಮವಾಗಿದೆ. ರೈತರ ಮೇಲಿನ ಗೌರವದಿಂದ ಅನೇಕ ಗಣ್ಯರು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೊಂದು ದಿನ ರೈತನ ಕುರಿತಾದ ಚಿತ್ರ ನಿರ್ಮಾಣ ಮಾಡುತ್ತೇನೆ ಎಂದ ಸಂಜಯ್ ಗೌಡ ಅವರು, ಕಾರ್ಯಕ್ರಮ ಬಂದ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದರು. ಸಂಜಯ್ ಗೌಡ ಮತ್ತು ALL OK ತಂಡದವರನ್ನು ಶರವಣ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ವಿಮೆ ಇಲ್ಲದ ರೈತನ ಕುಟುಂಬದಲ್ಲಿ ಯಾರಿಗಾದರೂ ತೊಂದರೆಯಾದರೆ, ಕೇವಲ ಅವರ ಚಿಕಿತ್ಸೆ ವೆಚ್ಚದಲ್ಲಿ 50% ಕಡಿಮೆ ಮಾಡುವುದಾಗಿ ಯುನೈಟೆಡ್ ಆಸ್ಪತ್ರೆಯ ಶಾಂತಕುಮಾರ್ ಹೇಳಿದರು. ಭೋಧಿ ಟ್ರೀ ಸಂಸ್ಥೆಯವರು ಸುಮಾರು ನೂರೈವತ್ತಕ್ಕೂ ಅಧಿಕ ಮಕ್ಕಳಿಗೆ ವಿಶೇಷ ಕಿಟ್ ನೀಡಿದರು. ALL OK ಚಿತ್ರರಂಗ ಪ್ರವೇಶಿಸಿ ಹದಿನೈದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಗೌರವಿಸಿದರು.