Wednesday, October 22, 2025

Latest Posts

ಚುನಾವಣೆ ಮುನ್ನ ಮೈತ್ರಿ ಬಲ : ಕಾಂಗ್ರೆಸ್‌ಗೆ BJP-JDS ಸವಾಲು!

- Advertisement -

ಹೊಸದಾಗಿ ರಚನೆಯಾದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿ ಪಕ್ಷಗಳು ಸಮನ್ವಯ ಸಮಿತಿಗಳನ್ನು ರಚಿಸಲು ನಿರ್ಧರಿಸಿವೆ.

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭೇಟಿ ಮಾಡಿ, ಚುನಾವಣಾ ತಯಾರಿ ಕುರಿತು ಚರ್ಚಿಸಿದರು. ಮುಂದಿನ ಎಂಟು ದಿನಗಳಲ್ಲಿ ಸಮಿತಿ ಸದಸ್ಯರ ಹೆಸರುಗಳನ್ನು ಕುಮಾರಸ್ವಾಮಿ ಕಳುಹಿಸಲಿದ್ದಾರೆ. ವಿಜಯೇಂದ್ರ ಅವರು, ಕಾಂಗ್ರೆಸ್ ಆಡಳಿತದಲ್ಲಿ ಬೆಂಗಳೂರು ಹದಗೆಟ್ಟಿದೆ. ಯಾವುದೇ ಅಭಿವೃದ್ಧಿ ಇಲ್ಲ. ಜನರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಕೈಗಾರಿಕೋದ್ಯಮಿಗಳ ಸಲಹೆಗಳನ್ನು ಪರಿಗಣಿಸದೇ, ಸಚಿವರು ಅವರನ್ನು ಸಾರ್ವಜನಿಕವಾಗಿ ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಅವರು ಕಿಡಿಕಾರಿದರು. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ, ನೀರಾವರಿ ಇಲಾಖೆಯ ಕಮಿಷನ್ ದಂಧೆ ಹಾಗೂ ಮರಳು ಮಾಫಿಯಾದಿಂದ ಸರ್ಕಾರಕ್ಕೆ ಕೋಟ್ಯಂತರ ನಷ್ಟ ಉಂಟಾಗಿದೆ ಎಂದು ಹೇಳಿದರು.

ಶಿವಮೊಗ್ಗ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಇಸ್ಪೀಟ್ ಮತ್ತು ಮಟ್ಕಾ ದಂಧೆ ಪೊಲೀಸ್ ಹಾಗೂ ಆಡಳಿತ ಪಕ್ಷದ ಶಾಸಕರ ಬೆಂಬಲದಿಂದ ನಡೆಯುತ್ತಿದ್ದು, ಜನರು ಆತ್ಮಹತ್ಯೆಗೆ ತಳ್ಳಲ್ಪಡುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ–ಡಿ.ಕೆ.ಶಿವಕುಮಾರ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರ ಮಾದರಿ ಅಲ್ಲ, ಭ್ರಷ್ಟಾಚಾರದ ಮಾದರಿ. ಬಿಜೆಪಿ–ಜೆಡಿಎಸ್‌ ಒಟ್ಟಾಗಿ ಈ ಅವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಲಿದೆ ಎಂದು ಹೇಳಿದರು.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss