Sunday, October 5, 2025

Latest Posts

ಭಾರತೀಯರಿಗಿಲ್ಲ ಕೆಲಸ : ಇಂಡಿಯಾ ವಿರೋಧಿ ಟ್ರಂಪ್‌ ಹೊಸ ವರಸೆ

- Advertisement -

ನವದೆಹಲಿ : ಸದಾ ಅಮೆರಿಕ ಫಸ್ಟ್‌ ನೀತಿಗೆ ಅಂಟಿಕೊಂಡಿರುವ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇದೀಗ ಮತ್ತೆ ಹೊಸ ವರಸೆ ಆರಂಭಿಸಿದ್ದಾರೆ. ಇಷ್ಟು ದಿನಗಳ ಕಾಲ ತಮ್ಮ ದೇಶದಲ್ಲಿ ಹಲವು ವಿವಾದಾತ್ಮಕ ನಿರ್ಧಾರಗಳಿಂದ‌ ಟ್ರಂಪ್ ಸುದ್ದಿಯಾಗಿದ್ದರು.‌ ತೆರಿಗೆ ನೀತಿಯ ವಿರುದ್ಧ ಜನರು ಅಧ್ಯಕ್ಷರ ವಿರುದ್ದ ಬೀದಿಗಿಳಿದಿದ್ದರು. ಅಲ್ಲದೆ ಟೆಕ್‌ ದಿಗ್ಗಜ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರೊಂದಿಗೆ ಕಿತ್ತಾಡಿಕೊಂಡಿದ್ದೂ ಆಗಿದೆ.

ಅಮೆರಿಕದ ಅಧ್ಯಕ್ಷರಾದಾಗಿನಿಂದ ಡೊನಾಲ್ಡ್‌ ಟ್ರಂಪ್ ತಮ್ಮ ನಿರ್ಧಾರಗಳಿಂದ ಜಗತ್ತನ್ನು ಬೆಚ್ಚಿಬೀಳಿಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಭಾರೀ ಸುಂಕಗಳನ್ನು ವಿಧಿಸಿದರು. ನಂತರ ಅವರು ಆ ನಿರ್ಧಾರವನ್ನು 90 ದಿನಗಳವರೆಗೆ ಮುಂದೂಡಿದರು. ಈಗ, ಆ ಗಡುವು ಕೊನೆಗೊಳ್ಳುತ್ತಿದ್ದಂತೆ, ಅವರು ಸುಂಕಗಳನ್ನು ಹೆಚ್ಚಿಸುವ ಪ್ರಕ್ರಿಯೆಯಲ್ಲಿದ್ದಾರೆ.

ಯುಎಸ್ ಚುನಾವಣೆಯ ಸಮಯದಲ್ಲಿ, ವ್ಯವಹಾರಗಳ ವಿಷಯದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಹೇಳಿದ್ದರು. ಈಗ, ಅವರು ಈ ವಿಷಯದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ, ಭಾರತಕ್ಕೆ ಬಹು ದೊಡ್ಡ ಆಘಾತ ನೀಡಿದ್ದಾರೆ.

ಆದರೆ ಇದೀಗ ಅಮೆರಿಕದ ಕಂಪನಿಗಳಿಗೆ ಟ್ರಂಪ್‌ ನೀಡಿರುವ ಆದೇಶ ನಿಜಕ್ಕೂ ದಂಗು ಬಡಿಸುವಂತಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ನೇಮಕಾತಿಯನ್ನು ನಿಲ್ಲಿಸುವಂತೆ ಟ್ರಂಪ್ ಗೂಗಲ್ ಮತ್ತು ಮೈಕ್ರೋಸಾಫ್ಟ್‌ಗೆ ಎಚ್ಚರಿಕೆಯ ಆದೇಶ ನೀಡಿದ್ದಾರೆ. ಸ್ವದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಟ್ರಂಪ್ ಸೂಚಿಸಿದ್ದಾರೆ. ಅಮೆರಿಕನ್ನರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಾಷಿಂಗ್ಟನ್‌ನಲ್ಲಿ ಎಐ ಟೆಕ್‌ ಸಮ್ಮಿಟ್‌ನಲ್ಲಿ ಮಾತನಾಡಿರುವ ಟ್ರಂಪ್‌, ಕಂಪನಿಗಳು ಇಲ್ಲಿಯೇ ಸ್ಥಾಪನೆಯಾಗಬೇಕು. ಇಲ್ಲಿಯವರನ್ನೇ ಕೆಲಸಕ್ಕೆ ಸೇರಿಸಿಕೊಳ್ಳಬೇಕೆಂದು ಟೆಕ್‌ ಕಂಪನಿಗಳ ಮುಖ್ಯಸ್ಥರಿಗೆ ಟ್ರಂಪ್ ಕಟ್ಟಪ್ಟಣೆ ಮಾಡಿದ್ದಾರೆ. ‌ ಇಲ್ಲಿ ನಿಮ್ಮ ಜಾಗತಿಕವಾದದ ಮನಸ್ಥಿತಿ ನಮಗೆ ಬೇಕಾಗಿಲ್ಲ. ಅಮೆರಿಕದಲ್ಲಿನ ನಾಗರಿಕರಿಗೆ ಮೊದಲು ಉದ್ಯೋಗಗಳು ಸಿಗಬೇಕು. ಅದರತ್ತ ಹೆಚ್ಚಿನ ಗಮನ ಹರಿಸಿ, ನೀವು ಭಾರತ ಹಾಗೂ ಚೀನಾದವರ ನೇಮಕ ಈಗಿನಿಂದಲೇ ನಿಲ್ಲಿಸಿ ಎಂದು ತಾಕೀತು ಮಾಡಿದ್ದಾರೆ.

ನೀವೆಲ್ಲ ಚೀನಾದಲ್ಲಿ ಕಂಪನಿ ತೆರೆಯುತ್ತೀರಿ, ಭಾರತದ ಪ್ರತಿಭಾವಂತರಿಗೆ ಕೆಲಸ ನೀಡುತ್ತೀರಿ ಹಾಗೂ ಐರ್ಲೆಂಡ್‌ನಲ್ಲಿ ಹೂಡಿಕೆ ಮಾಡುತ್ತೀರಿ. ಆದರೆ ನನ್ನ ಆಡಳಿತದಲ್ಲಿ ಇದೆಲ್ಲ ನಡೆಯುವುದಿಲ್ಲ ಎಂದು ಟ್ರಂಪ್‌ ಟೆಕ್‌ ಕಂಪನಿಗಳ ಮುಖ್ಯಸ್ಥರ ವಿರುದ್ಧ ಅಬ್ಬರಿಸಿದ್ದಾರೆ. ಕೃತಕ ಬುದ್ದಿ ಮತ್ತೆಯ ಜೊತೆಗೆಯೇ ರಾಷ್ಟ್ರದ ಮೇಲಿನ ನಿಷ್ಠೆಯು ಇರಬೇಕಾಗುತ್ತದೆ. ದೇಶದ ಮೇಲೆ ಅಭಿಮಾನವೂ ಇರಬೇಕಾಗುತ್ತದೆ ಎಂದು ಟ್ರಂಪ್‌ ಸಲಹೆ ನೀಡಿದ್ದಾರೆ.

ಒಟ್ನಲ್ಲಿ.. ಟ್ರಂಪ್‌ ಜಾಗತಿಕ ಮಟ್ಟದ ಆಘಾತಕಾರಿ ನಿರ್ಣಯಗಳ ಮೂಲಕವೇ ಜಗತ್ತಿನಲ್ಲಿ ಸುದ್ದಿಯಾಗುತ್ತಿದ್ದಾರೆ. ವಿಶ್ವಕ್ಕೆ ಶಾಕ್‌ ನೀಡುವುದೆಂದರೆ ಈ ಟ್ರಂಪ್‌ಗೆ ಎಲ್ಲಿಲ್ಲದ ಸಂತೋಷ ಹಾಗೂ ಖುಷಿಯಾಗುತ್ತದೆ. ಹೀಗಾಗಿ ಯಾರಿಗೆ ಯಾವಾಗ ಯಾವ ಸಮಯದಲ್ಲಿ ಈ ಟ್ರಂಪ್‌ ಆಘಾತ ನೀಡುತ್ತಾರೆ ಎನ್ನುವುದಕ್ಕೆ ಅವರ ಈ ಹಿಂದಿನ ನಿರ್ಣಯಗಳನ್ನು ಗಮನಿಸಿದಾಗ ತಿಳಿದು ಬರುತ್ತದೆ. ಭಾರತೀಯರಿಗೆ ಅಮೆರಿಕದಲ್ಲಿ ಉದ್ಯೋಗ ಕಡಿತದ ಬಗ್ಗೆ ಮಾತನಾಡಿರುವ ಟ್ರಂಪ್‌ ಹೇಳಿಕೆಗೆ ಭಾರತ ಸರ್ಕಾರ ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

- Advertisement -

Latest Posts

Don't Miss