Bengaluru News: ಬೆಂಗಳೂರಿನ ಸುಗಮ ಆಡಳಿತಕ್ಕಾಗಿ ಹಾಗೂ ಅಭಿವೃದ್ದಿಗೆ ಇನ್ನಷ್ಟು ವೇಗ ನೀಡಲು ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಪರಿಕಲ್ಪನೆಯನ್ನು ಪರಿಚಯಿಸಿದೆ. ಈ ಕುರಿತು ಅಧ್ಯಯನಕ್ಕಾಗಿ ಶಿವಾಜಿನಗರದ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರ ಅಧ್ಯಕ್ಷತೆಯಲ್ಲಿ 2024ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿದ್ದ ಕರ್ನಾಟಕ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿಯ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಲಾಗಿದೆ.
ರಾಜಧಾನಿ ಬೆಂಗಳೂರಿನ ಆಡಳಿತ ಸುಧಾರಣೆಗಾಗಿ ಗರಿಷ್ಠ ಏಳು ಮಹಾನಗರ ಪಾಲಿಕೆಗಳನ್ನಾಗಿ ವಿಂಗಡಿಸುವುದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಸೇರಿದಂತೆ ಹಲವು ಮಹತ್ವದ ಶಿಫಾರಸುಗಳನ್ನು ಒಳಗೊಂಡ ವರದಿಯ ಬಗ್ಗೆ ಸದನದಲ್ಲಿ ಮಹತ್ವದ ಚರ್ಚೆಯಾಗಿದೆ.
ರಿಜ್ವಾನ್ ಅರ್ಷದ್ ಅವರು ಸಲ್ಲಿಸಿರುವ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕದಲ್ಲಿ ಹಲವಾರು ಮುಖ್ಯವಾದ ಅಂಶಗಳನ್ನು ಪರಿಗಣಿಸಲಾಗಿದೆ. ಅಲ್ಲದೆ ಪ್ರಾಧಿಕಾರದ ಕಾಯ್ದೆಯು ಅಧಿಸೂಚನೆಯಾದ ಕೂಡಲೇ ಇದು ಅನುಷ್ಠಾನಕ್ಕೆ ಬರಲಿದೆ. ಇನ್ನೂ ಗ್ರೇಟರ್ ಬೆಂಗಳೂರಿನಲ್ಲಿ ಗರಿಷ್ಠವೆಂದರೆ 7 ಮಹಾನಗರ ಪಾಲಿಕೆಗಳಿರಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ ಈ ಎಲ್ಲ ಪಾಲಿಕೆಯು ತಲಾವಾರು ಕನಿಷ್ಠ 10 ಲಕ್ಷ ಜನಸಂಖ್ಯೆಯನ್ನು ಹೊಂದಿರಬೇಕು. ಅಂದಹಾಗೆ ಈ ಪಾಲಿಕೆಗಳಲ್ಲಿ ಪ್ರತಿ ಕಿಲೋ ಮೀಟರ್‌ಗೆ 15 ಸಾವಿರಕ್ಕಿಂತ ಕಡಿಮೆ ಜನಸಾಂದ್ರತೆ ಇರಬಾರದು. ಇನ್ನೂ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ವರ್ಷಕ್ಕೆ ಗರಿಷ್ಠ 300 ಕೋಟಿಗೂ ಹೆಚ್ಚಿನ ಆದಾಯವಿರಬೇಕು ಜೊತೆಗೆ ಕೃಷಿಯೇತರ ಚಟುವಟಿಕೆಗಳಲ್ಲಿ ಶೇಕಡಾ50 ಕ್ಕಿಂತಲೂ ಉದ್ಯೋಗ ಪ್ರಮಾಣ ಕಡಿಮೆ ಇರಬಾರದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೇಗಿರಲಿದೆ ಗ್ರೇಟರ್ ಬೆಂಗಳೂರು ವಿಧೇಯಕ..?
ಅಲ್ಲದೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳನ್ನು ಈ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಸೇರ್ಪಡೆ ಮಾಡಬಹುದಾಗಿದೆ. ಈ ಎಲ್ಲ ಮಹಾನಗರ ಪಾಲಿಕೆಗಳಿಗೆ ಮೇಯರ್ ಇರಲಿದ್ದು, ಅವರ ಅಧಿಕಾರಾವಧಿ 5 ವರ್ಷ ಆಗಿರಲಿದೆ. ವಾರ್ಡ್ ವಿಂಗಡಣೆಯನ್ನು ಜನಸಂಖ್ಯೆ ಆಧಾರದ ಮೇಲೆ ಸರ್ಕಾರವೇ ನಿರ್ಧರಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ನಿಗದಿತ ಸಂಖ್ಯೆಯ ವಾರ್ಡ್‌ಗಳನ್ಮು ರಚಿಸಬೇಕು. ಅಲ್ಲದೆ 2 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಂದು ವಾರ್ಡ್ ಸೇರುವಂತೆ ವಿಂಗಡಣೆ ಮಾಡಬಾರದು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಇದರ ಜೊತೆಗೆ ಲೋಕಸಭೆ, ರಾಜ್ಯ ಸಭೆ, ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಇರಲಿದ್ದಾರೆ. ಅಲ್ಲದೆ ಬಿಎಂಆರ್‌ಸಿಎಲ್, ಬೆಂಗಳೂರಿನ ಸಂಚಾರಿ ಪೊಲೀಸರು, ರೈಲ್ವೆ ಮೂಲ ಸೌಲಭ್ಯ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಕೊಳಚೆ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ವಿವಿಧ ಏಜೆನ್ಸಿಗಳ ಮುಖ್ಯಸ್ಥರು ಗ್ರೇಟರ್ ಬೆಂಗಳೂರಿನ ಸದಸ್ಯರಾಗಿರಲಿದ್ದಾರೆ. ಇನ್ನೂ ಪ್ರಮುಖವಾಗಿ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾಗಲಿದೆ. ಅದರ ಕೆಳಗೆ ಮಹಾನಗರ ಪಾಲಿಕೆಗಳಿರಲಿದ್ದು, ಮೇಯರ್, ಆಯುಕ್ತರು, ಜಂಟಿ ಆಯುಕ್ತರು. ಸ್ಥಾಯಿ ಸಮಿತಿ ಮತ್ತು ವಾರ್ಡ್ ಸಮಿತಿಗಳನ್ನು ರಚಿಸಲಾಗುತ್ತದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಗ್ರೇಟರ್ ಬೆಂಗಳೂರಿನ ಉಪಾಧ್ಯಕ್ಷರಾಗಿರಲಿದ್ದಾರೆ ಎಂದು ಶಾಸಕ ರಿಜ್ವಾನ್ ಅರ್ಷದ್ ಅವರ ವರದಿಯಲ್ಲಿ ತಿಳಿಸಲಾಗಿದೆ.
ಮುಖ್ಯವಾಗಿ ಇದು ಭ್ರಷ್ಟಾಚಾರ ನಿಯಂತ್ರಣ, ಅಧಿಕಾರ ವಿಕೇಂದ್ರಿಕರಣ, ಪಾರದರ್ಶಕ ಆಡಳಿತಕ್ಕೆ ಬೇಕಾಗುವ ಪ್ರಮುಖವಾದ ಅಸ್ತ್ರವಾಗಿದ್ದು, ಪ್ರತಿ ಪಾಲಿಕೆಯಲ್ಲಿ 100ಕ್ಕಿಂತ ಕಡಿಮೆ ಸದಸ್ಯರ ಸಂಖ್ಯೆಯು ಇರಬಾರದು. ಅಲ್ಲದೆ ಮಹಾನಗರ ಪಾಲಿಕೆಗೆ ಆಯ್ಕೆಗೊಂಡ ಸದಸ್ಯರು ಪ್ರತಿ ವರ್ಷ ಜೂನ್ ತಿಂಗಳಲ್ಲಿ ತಮ್ಮ ತಮ್ಮ ಆಸ್ತಿಯನ್ನು ಘೋಷಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಆರ್ಥಿಕ ವ್ಯವಹಾರಗಳನ್ನು ನಡೆಸುವ ಅಧಿಕಾರವಿಲ್ಲ. ಈ ಪ್ರಾಧಿಕಾರಕ್ಕೆ ನಗರ ಪಾಲಿಕೆಗಳ ತೆರಿಗೆ ಶುಲ್ಕ, ಉಪಕರ, ಹಾಗೂ ಬಳಕೆದಾರರ ಶುಲ್ಕಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಭಾಗಿಯಾಗಲು ಅಧಿಕಾರ ಇಲ್ಲ.ಅಲ್ಲದೆ ಕೇವಲ ಇದೊಂದು ಸಲಹಾತ್ಮಕವಾಗಿ ಬೇಕಾದ ನೀತಿಗಳ ನಿರ್ಧಾರಗಳನ್ನು ಮಾಡಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.