Bengaluru News: ಬೆಂಗಳೂರು: ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ( ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ) 2025 ಕಾಯ್ದೆ ಜಾರಿಗೆ ರಾಜ್ಯಪಾಲರಿಂದ ಅಂಕಿತ ದೊರೆತಿದೆ.
ರಾಜ್ಯದ ಅಸಂಘಟಿತ ವಲಯದ ಗಿಗ್ ಕಾರ್ಮಿಕರ ಕಲ್ಯಾಣಕ್ಕೆ ಕಾರ್ಮಿಕ ಇಲಾಖೆ ಮುಂದಾಗಿದ್ದ ಕ್ರಮಕ್ಕೆ ಇದರಿಂದ ಬಲ ಬಂದಂತಾಗಿದೆ.
ಈ ಕಾಯ್ದೆಯು ಗಿಗ್ ಕಾರ್ಮಿಕರ ಸರ್ವೋತ್ತಮ ಅಭಿವೃದ್ಧಿಗೆ ಮಂಡಳಿಯ ರಚನೆ ಹಾಗೂ ಕ್ಷೇಮಾಭಿವೃದ್ಧಿ ನಿಧಿ ರಚನೆಗೆ ಅವಕಾಶ ಸಿಗಲಿದೆ.
ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಈ ಮಂಡಳಿಯು 2 ಲಕ್ಷಕ್ಕೂ ಅಧಿಕ ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ಹಲವು ರೀತಿಯಲ್ಲಿ ನೆರವಾಗಲಿದೆ.
ಭಾರತದಲ್ಲಿ ರಾಜಸ್ಥಾನ ನಂತರ ಈ ಕಾಯ್ದೆ ಕರ್ನಾಟಕದಲ್ಲಿ ಜಾರಿಗೆ ಬಂದಿದ್ದು, ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಸತತವಾಗಿ ಪ್ರಯತ್ನಿಸುತ್ತಿದ್ದ ಸಚಿವ ಸಂತೋಷ್ ಲಾಡ್ ಅವರಿಗೆ ಸಂದ ಜಯವಾಗಿದೆ.
ಛಲ ಬಿಡದ ಸಚಿವ ಲಾಡ್
ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬರುವಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಶ್ರಮ ಬಹಳಷ್ಟಿದೆ. ಛಲ ಬಿಡದೆ ಲಾಡ್ ಅವರು ಸರ್ಕಾರದ ಮಟ್ಟದಲ್ಲಿ ಕೆಲಸ ಮಾಡಿದ್ದು ಬಹಳಷ್ಟು ಪ್ರಶಂಸೆಗೆ ಪಾತ್ರವಾಗಿದೆ.
ಮಂಡಳಿ ರಚನೆ ಸಂಬಂಧ ಲಾಡ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ದೆಹಲಿಯಲ್ಲಿ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದೀಗ ರಾಜ್ಯಪಾಲರು ಅಂಕಿತದೊಂದಿಗೆ ಲಾಡ್ ಅವರ ಪ್ರಯತ್ನಕ್ಕೆ ಫಲ ಸಿಕ್ಕಂತೆ ಆಗಿದೆ.
ಇತ್ತೀಚೆಗೆ ಗಿಗ್ ಆರ್ಥಿಕತೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದು, ಲಕ್ಷಾಂತರ ಕಾರ್ಮಿಕರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಅವರೆಲ್ಲರ ಕಲ್ಯಾಣಕ್ಕೆ ಹಾಗೂ ಸಾಮಾಜಿಕ ಸೇವಾ ಯೋಜನೆಗೆ ರೂಪಿಸಲು ಪ್ರತ್ಯೇಕ ಮಂಡಳಿ ರಚನೆಯಾದರೆ ಅನುಕೂಲವಾಗಲಿದೆ.