Political News: ರಾಜ್ಯದಲ್ಲಿ ಈ ಹಿಂದೆ ಅಧಿಕಾರ ನಡೆಸಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು 40% ಲಂಚದ ಆರೋಪ ಮಾಡಿದ್ದರು. ಈ ಕುರಿತು ವರದಿ ಪಡೆಯಲು ಕಾಂಗ್ರೆಸ್ ಸರ್ಕಾರ ನೇಮಕ ಮಾಡಿರುವ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗದ ವರದಿಯ ಆಧಾರದಲ್ಲಿ ಉನ್ನತ ತನಿಖೆಗಾಗಿ ವಿಶೇಷ ತನಿಖಾ ತಂಡ ಎಸ್‌ಐಟಿ ರಚನೆಗೆ ಸಚಿವ ಸಂಪುಟ ತೀರ್ಮಾನಿಸಿದೆ. ಈ ಮೂಲಕ ಮತ್ತೊಮ್ಮೆ ಬಿಜೆಪಿಗೆ ಶಾಕ್ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ಇನ್ನೂ ಈ ಕುರಿತು ಮಾಹಿತಿ ನೀಡಿರುವ ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಆಯೋಗವು ನೀಡಿರುವ ವರದಿಯಲ್ಲಿ ಕಾಮಗಾರಿಗಳಿಗೆ ಅಧಿಕ ಮೊತ್ತ ಪಾವತಿಯಾಗಿರುವುದು, ಅಲ್ಲದೆ ಕೆಲವು ಬಿಲ್ ತೆಗೆದಿದ್ದರೂ ಕಾಮಗಾರಿ ನಡೆದ ಬಗ್ಗೆಯೇ ಅನುಮಾನ ಮೂಡುತ್ತಿದೆ. ಅಲ್ಲದೆ ಟೆಂಡರ್ ಪ್ರಕ್ರಿಯೆಯಲ್ಲಿ ಹಲವಾರು ಲೋಪದೋಷಗಳು ಕಂಡು ಬಂದಿವೆ. ಇದನೆಲ್ಲ ಗಂಭೀರವಾಗಿ ಪರಿಗಣಿಸಿ ವರದಿ ಆಧಾರದ ಮೇಲೆ ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ರಚಿಸಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.
2 ತಿಂಗಳಲ್ಲಿ ಎಸ್‌ಐಟಿ ವರದಿ..
ಅಲ್ಲದೆ ಕೆಲ ವಿಷಯಗಳ ಪರಿಣತರು ಹಾಗೂ ತಜ್ಞರು ಈ ವಿಶೇಷ ತನಿಖಾ ತಂಡದ ಭಾಗವಾಗಲಿದ್ದಾರೆ. ಇವರು 2 ತಿಂಗಳಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗಡುವು ನೀಡಲು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಈ ಹಗರಣದ ಹಿನ್ನೆಲೆ ಕೆಲವು ಇಲಾಖೆಗಳಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವೂ ಆಗಿದೆ ಎಂಬ ಅಂಶವನ್ನು ವರದಿಯು ಬಯಲಿಗೆಳೆದಿದೆ. ಈ ಕುರಿತೂ ಎಸ್‌ಐಟಿಯು ತನಿಖೆ ನಡೆಸಲಿದೆ. ಇದಕ್ಕೆ ಪೂರಕವಾದ ಮಾಹಿತಿಯನ್ನು ಒದಗಿಸಲು ಇಲಾಖೆಗಳಿಗೆ ಸೂಚಿಸಲಾಗುವುದು ಎಂದಿದ್ದಾರೆ.
1,729 ಕಾಮಗಾರಿ ಸ್ಯಾಂಪಲ್..!
2019ರಿಂದ 2023ರ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಒಟ್ಟು ಅಂದಾಜು ಮೂರು ಲಕ್ಷ ಕಾಮಗಾರಿಗಳ ಪೈಕಿ ಪ್ರಮುಖ ಐದು ಇಲಾಖೆಗಳಲ್ಲಿ 1,729 ಕಾಮಗಾರಿಗಳನ್ನು ಸ್ಯಾಂಪಲ್ ಆಗಿ ಪಡೆದು ನಾಗಮೋಹನ್ ದಾಸ್ ನೇತೃತ್ವದ ಆಯೋಗವು ತನಿಖಾ ವರದಿಯನ್ನು ಸಿದ್ಧಪಡಿಸಿದೆ. ಲೋಕೊಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಎಲ್ಲ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯಾವ್ಯಾವ ರೀತಿ ನಿಯಮ ಉಲ್ಲಂಘನೆ..?
ಇನ್ನೂ ಪ್ರಮುಖವಾಗಿ ಶೇಕಡಾ 8 ರಷ್ಟು ಕಾಮಗಾರಿಗಳನ್ನು ಆಡಳಿತಾತ್ಮಕ ಅನುಮೋದನೆ ಇಲ್ಲದೆ ನಡೆಸಲಾಗಿದೆ. ಟೆಂಡರ್ ಪ್ರಕ್ರಿಯೆ ಸರಿಯಾಗಿ ನಡೆಸಲಾಗದೆ ಶೇಕಡಾ 14 ರಷ್ಟು ಕಾಮಗಾರಿಗಳಾಗಿವೆ. ಗುಣಮಟ್ಟವನ್ನು ಕಾಪಾಡಿಕೊಳ್ಳದೆ ಶೇಕಡಾ 10 ರಷ್ಟು ಕಾಮಗಾರಿಗಳು ಹಾಗೆ ಆಗಿವೆ. ಇನ್ನೂ ಶೇಕಡಾ 13 ರಷ್ಟು ಕಾಮಗಾರಿಗಳಲ್ಲಿ ಶಾಸನಬದ್ಧ ಹಂಚಿಕೆಯಲ್ಲಿ ಲೋಪವಿದೆ. ಶೇಕಡಾ 17 ರಷ್ಟು ಕಾಮಗಾರಿಗಳಲ್ಲಿ ನಿಗದಿತ ಅವಧಿಯಲಿ ಭದ್ರತಾ ಠೇವಣಿ ಬಿಡುಗಡೆ ಮಾಡಿಲ್ಲ. ಇನ್ನೂ ಪ್ರಮುಖವಾಗಿ ಶೇಕಡಾ 23 ರಷ್ಟು ಕಾಮಗಾರಿಗಳಲ್ಲಿ ಬಿಲ್ ಪಾವತಿಯಲ್ಲಿ ಜೇಷ್ಠತಾ ಕ್ರಮ ಅನುಸರಿಸಿಲ್ಲ ಮತ್ತು ಸಂಬಂಧಪಟ್ಟ ಲೆಕ್ಕ ಶಿರ್ಷಿಕೆ ಅಡಿಯಲ್ಲಿ ಬಿಲ್ ಪಾವತಿಯಾಗಿಲ್ಲ ಎಂಬ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ.
ನಾಗಮೋಹನ್ ದಾಸ್ ವರದಿ ಹೇಳೋದೇನು..?
ಇನ್ನೂ ಪ್ರಮುಖವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸರ್ಕಾರದ 5 ಇಲಾಖೆಗಳಲ್ಲಿ ಶೇಕಡಾ 40 ರಷ್ಟು ಕಮಿಷನ್‌ಗಿಂತ ಅಧಿಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿತ್ತು. ಆದರೆ ಇದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ನೀಡಲು ಸಂಘಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಈ ಆರೋಪದ ಕುರಿತು ಸ್ಪಷ್ಟ ತೀರ್ಮಾನಕ್ಕೆ ಬರುವುದು ಅಷ್ಟೊಂದು ಸುಲಭವಾದುದ್ದಲ್ಲ ಎಂದು ಆಯೋಗವು ವರದಿಯಲ್ಲಿ ಸರ್ಕಾರಕ್ಕೆ ಸ್ಪಷ್ಟಪಡಿಸಿದೆ. ಅಲ್ಲದೆ ದಾಖಲೆಗಳು ದೊರೆತಿಲ್ಲ ಎಂದ ಮಾತ್ರಕ್ಕೆ ಭ್ರಷ್ಟಾಚಾರ ನಡೆದಿಲ್ಲ ಎನ್ನುವುದು ಒಪ್ಪಲಾಗದು. ಮೇಲ್ನೋಟಕ್ಕೆ ನೋಡಿದಾಗ ಭ್ರಷ್ಟಾಚಾರ, ಅಕ್ರಮ, ಅವ್ಯವಹಾರ ಹಾಗೂ ಟೆಂಡರ್ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಇದರ ಕುರಿತು ಪ್ರತ್ಯೇಕ ವಿಚಾರಣೆ ನಡೆಸುವ ಮೂಲಕ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಯೋಗವು ತನ್ನ ಶಿಫಾರಸ್ಸಿನಲ್ಲಿ ತಿಳಿಸಿದೆ.