www.karnatakatv.net:ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನಗಲಿ ಒಂದು ತಿಂಗಳು ಆಗುತ್ತಿದೆ ಆದರೆ ಅವರ ನೆನಪುಗಳು ಇನ್ನೂಕೂಡ ಎಲ್ಲರಲ್ಲಿ ಕಾಡುತ್ತಿದೆ.
ಪುನೀತ್ ಅವರು ನಟನೆ, ಹಾಡುವುದರ ಜೊತೆಗೆ ಯುವ ಪ್ರತಿಭೆಗಳನ್ನು ಬೆಂಬಲಿಸಲು ಪಿ,ಅರ್,ಕೆ ಪ್ರೊಡಕ್ಷನ್ಸ್ ಹಾಗೂ ಪಿ, ಆರ್,ಕೆ ಆಡಿಯೋ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಅವರೇ ಒಬ್ಬ ದೊಡ್ಡ ನಟರಾಗಿದ್ದರು ಪಿ,ಆರ್,ಕೆ ಸಂಸ್ಥೆಯ ಮೂಲಕ ಪ್ರತಿಭಾನ್ವಿತ ನಿರ್ದೇಶಕರು, ಕಲಾವಿದರುಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು.
ಪುನೀತ್ ಅವರ ಅಕಾಲಿಕ ನಿಧನದಿಂದ 1/11/2021 ರಂದು ಪಿ,ಆರ್,ಕೆ ಪ್ರೊಡಕ್ಷನ್ಸ್ ಸಂಸ್ಥೆ ಇಂದ ಘೋಷಣೆಯಾಗಬೇಕಿದ್ದ ವಿಷಯ ಒಂದು ಹಾಗೆ ಉಳಿದಿತ್ತು ಆದರೀಗ ಆ ಘೋಷಣೆಯನ್ನು ಇನ್ನೇನು ಅಧಿಕೃತವಾಗಿ ತಿಳಿಸುವುದಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
“ಅಪ್ಪು ಅವರ ಕನಸೊಂದು 1/11/2021 ರಂದು ಬೆಳಕು ಕಾಣಬೇಕಿತ್ತು. ಆದರೆ ಆ ಕನಸಿಗಿದು ಅಲ್ಪವಿರಾಮವಷ್ಟೆ, ಅದನ್ನು ಅವರಿಷ್ಟದಂತೆಯೇ ನಿಮ್ಮೆದುರು ನನಸಾಗಿಸುವ ಜವಾಬ್ದಾರಿ ನಮ್ಮದು.ಇಲ್ಲಿಯ ತನಕ ನೀವು ತೋರಿದ ಸಂಯಮ ಮತ್ತು ಸಹಕಾರಕ್ಕೆ ನಾವು ಆಭಾರಿ” ಎಂಬ ಸಾಲುಗಳನ್ನು ವ್ಯಕ್ತ ಪಡಿಸಿದ್ದಾರೆ.
ಇನ್ನೂ ಸಾಮಾಜಿಕ ತಾಣಗಳಲ್ಲಿ ಫೋಟೋದ ಮೇಲೆ ಈ ಸಾಲುಗಳನ್ನು ಬರೆದು ಹಾಕಿದ್ದು, ಪುನೀತ್ ಅವರು ಸ್ಕೂಬಾ ಡೈವ್ ಮಾಡುತ್ತಿರುವ ಫೋಟೋದ ಮೇಲೆ ಸಾಲುಗಳನ್ನು ಬರೆದಿದ್ದಾರೆ. ಹಾಗೂ ವೈಲ್ಡ್ ಫೋಟೋಗ್ರಫಿಯಲ್ಲಿ ಖ್ಯಾತಿ ಪಡೆದಿರುವ ಅಮೋಘವರ್ಷ, ಖ್ಯಾತ ಸಂಗೀತ ನಿರ್ದೇಶಕ ಬಿ,ಅಜನೀಶ್ ಲೋಕನಾಥ್, ಹಾಗೂ ಮಡ್ ಸ್ಕಿಪ್ಪರ್ ಎಂಬ ಸಂಸ್ಥೆಯನ್ನು ಟ್ಯಾಗ್ ಮಾಡಿದ್ದಾರೆ.
ಇನ್ನೂ ಇದು ಕಾಡಿನ ಹಾಗೂ ವನ್ಯಜೀವಿಗಳ ಕುರಿತು ಪುನೀತ್ ಅವರು ಸಾಕ್ಷ್ಯಚಿತ್ರ ಮಾಡಿದ್ದು, ಪಿ,ಆರ್,ಕೆ ಸಂಸ್ಥೆ ಹಾಗೂ ಮಡ್ ಸ್ಕಿಪ್ಪರ್ ಸಂಸ್ತೆಯ ಸಹಭಾಗಿತ್ವದಲ್ಲಿ ಈ ಸಾಕ್ಷ್ಯಚಿತ್ರ ಹೊರಬರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದರ ಬಗ್ಗೆ ಖಚಿತ ಮಾಹಿತಿಯು ಅಧಿಕೃತವಾಗಿ ಕೆಲದಿನಗಳಲ್ಲಿ ಹೊರಬೀಳಲಿದೆ. ಪುನೀತ್ ಅವರ ಕನಸು ನನಸಾಗಲಿದೆ ಎಂಬುದು ಖಚಿತವಾಗಿದೆ.
ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ