ರಮೇಶ್ ಜಾರಕಿಹೊಳಿಗೆ ಸಿಡಿ ಪ್ರಕರಣದಲ್ಲಿ (case of CD) ಸಂಕಷ್ಟ ಎದುರಾಗಿದೆ. ರಮೇಶ್ ಜಾರಕಿಹೊಳಿ (Ramesh Jarakiholi) ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (SIT) ಹೈಕೋರ್ಟ್ ಗೆ ಸಲ್ಲಿಸಿದ ಬಿ ರಿಪೋರ್ಟ್ (B Report) ಅನ್ನು ಸುಪ್ರೀಂಕೋರ್ಟ್ (Supreme Court) ತಡೆಹಿಡಿದಿದೆ. ಎಸ್ಐಟಿ ತನಿಖೆ ಪ್ರಶ್ನಿಸಿ ಸಂತ್ರಸ್ತ ಯುವತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ. ಹೀಗಾಗಿ ಯುವತಿಗೆ ಕೆಲಸದ ಆಮಿಷವೊಡ್ಡಿ ಲೈಂಗಿಕ ದುರ್ಬಳಕೆ ಮಾಡಿಕೊಂಡ ಆರೋಪ ಸಂಬಂಧ ಎಸ್ಐಟಿ ಸಲ್ಲಿಸಿದ್ದ ‘ಬಿ’ ವರದಿಗೆ ತಡೆ ಸಿಕ್ಕಂತಾಗಿದೆ, ಎಸ್ಐಟಿ ಕಾನೂನು ಬದ್ಧ ರಚನೆ, ತನಿಖಾ ವರದಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಹೈಕೋರ್ಟ್ಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ರಚನೆಯೇ ಸರಿಯಿಲ್ಲ, ಎಸ್ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್ ಕೈಗೆತ್ತಿಕೊಳ್ಳಲಿದೆ. ಅರ್ಜಿ ವಿಚಾರಣೆ ಪೂರ್ಣ ಆಗುವವರೆಗೂ ಎಸ್ಐಟಿ ಸಲ್ಲಿಸಿರುವ ಬಿ ವರದಿಯನ್ನು ಅಧೀನ ನ್ಯಾಯಾಲಯ ಅಂಗೀಕರಿಸಬಾರದು. ಇದರ ನಡುವೆ ಎಸ್ಐಟಿ ಮುಖ್ಯಸ್ಥರ ಸಹಿಯೊಂದಿಗೆ ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಹಸಿರು ನಿಶಾನೆ ತೋರಿತ್ತು. ಇದರ ಬೆನ್ನಲ್ಲೇ ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ((Cubbon Park Police Station)ಯಲ್ಲಿ ದಾಖಲಿಸಿದ್ದ ಎಫ್ಐಆರ್ ಸಂಬಂಧ ಎಸ್ಐಟಿ ತನಿಖಾ ತಂಡ ತನಿಖೆ ನಡೆಸಿ ಬಿ ವರದಿಯನ್ನು ಸಲ್ಲಿಸಿತ್ತು. ಎಸ್ಐಟಿ ತನಿಖೆಯಲ್ಲಿ ರಮೇಶ್ ಜಾರಕಿಹೊಳಿಯನ್ನು ಆರೋಪಮುಕ್ತ ಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ಸಂತ್ರಸ್ತ ಯುವತಿ ಪರ ವಕೀಲರು ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಎಸ್ಐಟಿ ಕಾನೂನು ಬದ್ಧವಾಗಿ ರಚನೆಯಾಗಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಎಸ್ಐಟಿ ರಚನೆ ಮಾಡಲಾಗಿದೆ. ಎಸ್ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆದಿದ್ದು, ಎಸ್ಐಟಿ ವರದಿಯ ಬಗ್ಗೆ ನಂಬಿಕೆಯಿಲ್ಲ ಎಂದು ಸಂತ್ರಸ್ತ ಯುವತಿ ಪರ ವಕೀಲರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಯುವತಿಯ ಅರ್ಜಿಯನ್ನು ಅಂಗೀಕರಿಸುವ ಸುಪ್ರೀಂಕೋರ್ಟ್, ಎಸ್ಐಟಿ ರಚನೆಯ ಕ್ರಮಬದ್ಧತೆ ಎಸ್ಐಟಿ ಸಲ್ಲಿಸಿರುವ ತನಿಖಾ ವರದಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ಗೆ ನಿರ್ದೇಶನ ನೀಡಿದೆ. ಇದರಿಂದ ರಮೇಶ್ ಜಾರಕಿಹೊಳಿಗೆ ಮತ್ತೆ ಸಂಕಷ್ಟ ಎದುರಾಗಿದೆ. ತನಗೆ ಕ್ಲೀನ್ ಚಿಟ್ ಸಿಕ್ಕಿದೆ, ಮಂತ್ರಿ ಸ್ಥಾನ ಕೊಡಿ ಎಂದು ದೆಹಲಿ ಬಿಜೆಪಿ ನಾಯಕರ ಕದ ತಟ್ಟಿದ್ದ ರಮೇಶ್ ಜಾರಕಿಹೊಳಿ ಪುನಃ ಸಚಿವರಾಗುವ ತವಕದಲ್ಲಿದ್ದರು. ಈ ಅರ್ಜಿ ಇತ್ಯರ್ಥ ಆಗುವವರೆಗೂ ಜಾರಕಿಹೊಳಿ ಮತ್ತೆ ಸಚಿವ ಸ್ಥಾನ ಅಲಂಕರಿಸಲು ಸಾಧ್ಯವಿಲ್ಲ.