Friday, October 18, 2024

Latest Posts

ಮತ್ತೆ ಪಿಸ್ತೂಲ್ ಕೈಗೆತ್ತಿಕೊಂಡ ಬೆಳಗಾವಿ ಸಿಂಗಂ; ಕುಖ್ಯಾತ ಸುಪಾರಿ ಹಂತಕನ ಕಾಲಿಗೆ ಗುಂಡೇಟು!

- Advertisement -

ಇಂದು ಬೆಳ್ಳಂಬೆಳಿಗ್ಗೆ ಕುಂದಾನಗರಿ ಬೆಳಗಾವಿಯಲ್ಲಿ ಗುಂಡಿನ ಸದ್ದು ಮೊಳಗಿದೆ. ಹಲವಾರು ಪ್ರಕರಣದಲ್ಲಿ ಕರ್ನಾಟಕ- ಮಹಾರಾಷ್ಟ್ರ ಪೋಲಿಸರಿಗೆ ಬೇಕಾಗಿದ್ದ ಅಂತರ್ ರಾಜ್ಯ ಸುಪಾರಿ ಹಂತಕನ ಕಾಲಿಗೆ ಪೋಲಿಸರು ಗುಂಡು ಹೊಡೆದಿದ್ದು, ಈ ಮೂಲಕ ಕ್ರಿಮಿನಲ್‌ಗಳ ಆಟಾಟೋಪಕ್ಕೆ ಉತ್ತರ ನೀಡಲು ಎನ್ ಕೌಂಟರ್ ಸ್ಪೆಶಲಿಸ್ಟ್ ಎನ್.ವಿ.ಭರಮನಿ ಮತ್ತೆ ತಮ್ಮ ಪಿಸ್ತೂಲ್ ಅನ್ನು ಕೈಗೆತ್ತಿಕೊಂಡು ಅಖಾಡಕ್ಕಿಳಿದ್ದಾರೆ. ಇದು ಬೆಳಗಾವಿ ಕ್ರಿಮಿನಲ್ಸ್ ಗಳ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಮಾಡಿದೆ.

ಕಳೆದ ಮಾರ್ಚ- 15 ರಂದು ಬೆಳಗಾವಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ ಹತ್ಯೆ ನಡೆದಿತ್ತು. ಅದಾದ ನಂತರ ಹತ್ಯೆಗೆ ಸುಪಾರಿ ಪಡೆದ ಆರೋಪಿ, ಕುಖ್ಯಾತ ರೌಡಿ ವಿಶಾಲಸಿಂಗ್ ಚವ್ಹಾಣ ತಲೆಮರೆಸಿಕೊಂಡಿದ್ದ. ಪೋಲಿಸರಿಗೆ ಸುಳಿವು ಸಿಗದಂತೆ ಓಡಾಡಿಕೊಂಡಿದ್ದ, ಆದರೆ ಈತ ಇವತ್ತು ಬೆಳಗಾವಿಯ ವೀರಭದ್ರನಗರದಲ್ಲಿರುವ ಒಬ್ಬರ ಬಳಿ ಹಣದ ಬೇಡಿಕೆ ಇಟ್ಟು, ಇವತ್ತು ಹಣ ಪಡೆಯಲು ಬರುತ್ತಿದ್ಧಾನೆ ಅಂತ ಗೊತ್ತಾಗುತ್ತಿದ್ದಂತೆಯೇ ಇವನ ಬರುವಿಕೆಗಾಗಿ ಕಾಯ್ದು ಕುಳಿತಿದ್ದ ಬೆಳಗಾವಿ ನಗರ ಸಿಸಿಬಿ, ಎಸಿಪಿಯಾಗಿರುವ ಎನ್.ವ್ಹಿ.ಭರಮನಿ ಹಾಗೂ ತಂಡದವರ ಕಣ್ಣಿಗೆ ಕಾಣಿಸಿಕೊಂಡಿದ್ದಾನೆ. ಆರೋಪಿಯನ್ನು ಸುತ್ತುವರೆದ ಪೋಲಿಸರು, ಶರಣಾಗುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಯಾವಾಗ ಆರೋಪಿ ವಿಶಾಲಸಿಂಗ್ ಬಂಧಿಸಲು ಬಂದಿದ್ದ ಪೋಲಿಸರ ಮೇಲೆಯೇ ದಾಳಿ ಮಾಡಿ ಓಡಿ ಹೋಗಲು ಪ್ರಾರಂಭಿಸಿದ, ಆಗ ಅಲ್ಲಿಯೇ ಇದ್ದ ಎಸಿಪಿ, ಎನ್ ವಿ ಭರಮನಿ ನಿಲ್ಲುವಂತೆ ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದಾಗ ತಮ್ಮ ಪಿಸ್ತೂಲಿನಿಂದ ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಇದರಿಂದ ತೀವ್ರ ಗಾಯಗೊಂಡ ಆರೋಪಿ ವಿಶಾಲಸಿಂಗ್ ನನ್ನು ಪೋಲಿಸರು ವಶಕ್ಕೆ ಪಡೆದು ಬಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಈತನ ಬ್ಯಾಗ್ ತಪಾಸಣೆ ಮಾಡಿದಾಗ ಒಂದು ಪಿಸ್ತೂಲ್, ಚಾಕುಗಳು ಸಿಕ್ಕಿವೆ. ಇದೇ ಸಂದರ್ಭದಲ್ಲಿ ಗಾಯಗೊಂಡ ಪೊಲೀಸ್ ಪೇದೆ ಯಾಸೀನ್ ನದಾಪ್ ಅವರನ್ನೂ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಸ್ಥಳಕ್ಕೆ ನಗರ ಪೋಲಿಸ್ ಆಯುಕ್ತ ಬೊರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದೆ ಭೇಟಿ ನೀಡಿ ಪರಿಶೀಲನೆ ನಡೆಸಿ ಘಟನೆಯ ವಿವರ ಪಡೆದುಕೊಂಡರು.

ವಿಶಾಲಸಿಂಗ್ ಚವ್ಹಾಣ ಕರ್ನಾಟಕ ಮಹಾರಾಷ್ಟ್ರ ಪೋಲಿಸರಿಗೆ ಮೋಸ್ಟ್ ವಾಟೆಂಡ್ ಸುಪಾರಿ ಹಂತಕ. ಇತನ ಮೇಲೆ ಕರ್ನಾಟಕದಲ್ಲಿ 9, ಮಹಾರಾಷ್ಟ್ರದಲ್ಲಿ 2 ಪ್ರಕರಣಗಳಿವೆ. ಕರ್ನಾಟಕದ ಕೇಸ್ ಗಳ ಪೈಕಿ, 6 ಕೊಲೆಯತ್ನ, 1 ದರೋಡೆ,1 ಢಕಾಯತಿ,1 ಆರ್ಮ ಆ್ಯಕ್ಟ್ ಕೇಸ್ ದಾಖಲಾಗಿದೆ. ಕರ್ನಾಟಕದಲ್ಲಿ ಇತನ ಮೇಲೆ ರೌಡಿಸೀಟರ್ ಓಪನ್ ಮಾಡಲಾಗಿದ್ದು, ಹತ್ಯೆಗೆ ಸುಪಾರಿ ಪಡೆದು ತನ್ನ ಟೀಂ ನಿಂದ ಹತ್ಯೆ ಮಾಡಿಸಿ ಎರಡೂ ರಾಜ್ಯದಲ್ಲಿ ಅಡಗಿ ಕುಳಿತುಕೊಳ್ಳುತ್ತಿದ್ದ. ಅಷ್ಟೇ ಅಲ್ಲದೆ ಮೂರು ತಿಂಗಳ ಹಿಂದೆ ನಡೆದ ಬಿಲ್ಡರ್ ಮರ್ಡರ್ ಕೇಸ್ ನಲ್ಲಿ ಸುಪಾರಿ ಪಡೆದು ಹತ್ಯೆ ಮಾಡಿ ಮಹಾರಾಷ್ಟ್ರದಲ್ಲಿ ಅಡಗಿ ಕುಳಿತಿದ್ದ.

ಹೀಗೆ ತನ್ನ ಅಪರಾಧ ಕೃತ್ಯಗಳಿಂದ ಸಮಾಜದಲ್ಲಿ ಭಯ ಸೃಷ್ಟಿ ಮಾಡಿದ್ದ ವಿಶಾಲ್ ಸಿಂಗ್ ನ ಹೆಡೆಮುರಿ ಕಟ್ಟಲು ದಕ್ಷ, ಖಡಕ್ ಪೋಲಿಸ್ ಅಧಿಕಾರಿ ಎನ್.ವಿ.ಭರಮನಿ ನೇತೃತ್ವದಲ್ಲಿ ನಗರ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಟೀಂ ರಚಿಸಿದ್ದರು. ಅದರಂತೆ ಎನ್.ವಿ.ಭರಮನಿ ಬಹಳ ದಿನಗಳ ನಂತರ ಪಿಸ್ತೂಲ್ ಕೈಗೆತ್ತಿಕೊಂಡು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ಇನ್ನು ಬೆಳಗಾವಿ ನಗರ ಸಿಸಿಬಿ ಎಸಿಪಿಯಾಗಿರುವ ಎನ್ ವಿ.ಭರಮನಿ, ರೌಡಿಗಳಿಗೆ, ಕೊಲೆಗಡುಕರ, ಪಾತಕಿಗಳ ಪಾಲಿನ ಸಿಂಹಸ್ವಪ್ನವಾಗಿದ್ದಾರೆ. ಹಿಂದೆ ಕುಖ್ಯಾತ ರೌಡಿ ಪ್ರವೀಣ ಸಿಂತ್ರೆ ಸೇರಿ ಹಲವು ರೌಡಿಗಳನ್ನ ಎನ್ ಕೌಂಟರ್ ಮಾಡಿ ಬೆಳಗಾವಿ ಸಿಂಗಂ ಎಂದೇ ಖ್ಯಾತಿ ಪಡೆದವರು. ಇದೇ ಕಾರಣಕ್ಕಾಗಿ ಬೆಳಗಾವಿ ಜಿಲ್ಲೆ ಭರಮನಿ ಹೆಜ್ಜೆ ಇಟ್ರೆ ಸಾಕು ಪಾತಕಿಗಳು ಹೆದರಿ ಮನೆ ಸೇರಿಕೊಳ್ಳುತ್ತಾರೆ. ಕಳೆದ ಕೆಲವು ದಿನಗಳಿಂದ ಸೈಲೆಂಟಾಗಿದ್ದ ಇವರು ಇದೀಗ ಮತ್ತೆ ತಮ್ಮ ಪಿಸ್ತೂಲ್ ಕೈಗೆತ್ತಿಕೊಂಡು ಅಖಾಡಕ್ಕಿಳಿದಿದ್ದಾರೆ. ಇಂದು ಬೆಳಿಗ್ಗೆ ಸುಪಾರಿ ಹಂತಕನ ಗಾಲಿಗೆ ಗುಂಡು ಹೊಡೆದು ಸೆದೆಬಡಿದ್ದಾರೆ. ಹಲವು ವರ್ಷಗಳಿಂದ ನಂತರ ಮತ್ತೆ ಕ್ರಿಮಿನಲ್ಸ್ ವಿರುದ್ಧ ಭರಮನಿ ಅಖಾಡಕ್ಕಿಳಿರುವುದು ಬೆಳಗಾವಿ ಜನರಲ್ಲಿ ಹೊಸ ಭರವಸೆ ಮೂಡಿರುವುದಂತೂ ಸತ್ಯ.

- Advertisement -

Latest Posts

Don't Miss