ಗೋಲ್ಡನ್ ಮಿಲ್ಕ್. ಅಂದ್ರೆ ಚಿನ್ನದ ಹಾಲು ಕುಡಿಯುವುದರಿಂದ ನಿಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಅರೆ, ಇದೇನಿದು ಚಿನ್ನದ ಹಾಲು..? ಕಾಸ್ಟ್‌ಲೀ ಹಾಲಾ ಅಂತಾ ಶಾಕ್ ಆಗ್ಬೇಡಿ. ಚಿನ್ನದ ಹಾಲು ಅಂದ್ರೆ ಅರಿಶಿನ ಹಾಲು. ಇದರೊಂದಿಗೆ ಕೆಲ ಮಸಾಲೆ ಪದಾರ್ಥಗಳನ್ನ ಸೇರಿಸುತ್ತಾರೆ. ಹಾಗಾಗಿ ಇದು ಚಿನ್ನದಂಥ ಆರೋಗ್ಯ ಗುಣಗಳನ್ನ ಹೊಂದಿರುವುದರಿಂದ ಇದನ್ನ ಚಿನ್ನದ ಹಾಲು ಎನ್ನಲಾಗುತ್ತೆ.
ಆಯುರ್ವೇದದ ಪ್ರಕಾರ ಅರಿಶಿನ ಹಾಲು ಆರೋಗ್ಯಕ್ಕೆ ತುಂಬಾ ಒಳ್ಳೆಯದಂತೆ. ಭಾರತೀಯರಷ್ಟೇ ಅಲ್ಲದೇ, ವಿದೇಶಿಗರು ಕೂಡ ಆಯುರ್ವೇದ ಸೂತ್ರಗಳನ್ನ ಅನುಸರಿಸುತ್ತಿರುವ ಕಾರಣ, ಹಲವು ವಿದೇಶಿಗರು ಕೂಡ ಈ ಗೋಲ್ಡನ್ ಮಿಲ್ಕ್ ಕುಡಿದು, ತಮ್ಮ ಆರೋಗ್ಯದಲ್ಲಾದ ಬದಲಾವಣೆಗಳನ್ನ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಒಂದು ಗ್ಲಾಸ್ ಹಾಲನ್ನ ಕುದಿಯಲು ಇಡಿ. ಹಾಲು ಕುದಿ ಬಂದಾಗ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆ, ಚಿಟಿಕೆ ಅರಿಶಿನ, 5ರಿಂದ 6 ಎಸಳು ಕೇಸರಿ ದಳ,ಚಿಟಿಕೆ ಕಾಳು ಮೆಣಸಿನ ಪುಡಿ ಹಾಕಿ ಕುದಿಸಿ. 2ನಿಮಿಷ ಕುದಿಸಿದ ಬಳಿಕ ಗ್ಯಾಸ್ ಆಫ್ ಮಾಡಿ. ಅದಕ್ಕೆ ಒಂದು ಸ್ಪೂನ್ ಹಸುವಿನ ತುಪ್ಪ ಸೇರಿಸಿ ಕುಡಿಯಿರಿ.
ಚಿನ್ನದ ಹಾಲಿನ ಸೇವನೆಯಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡುವುದಾದರೆ, ಇದರಲ್ಲಿ ಅರಿಶಿಣ ಮತ್ತು ಕೇಸರಿ ದಳ ಸೇರಿಸಿರುವುದರಿಂದ ಈ ಹಾಲಿನ ಸೇವನೆ ಸೌಂದರ್ಯ ವೃದ್ಧಿಗೆ ಸಹಕಾರಿಯಾಗಿದೆ.
ಇದರಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಮೂಳೆಗಳು ಗಟ್ಟಿಯಾಗುವುದಲ್ಲದೇ, ಕೈ ಕಾಲು ನೋವು ಕಡಿಮೆಯಾಗುವುದು.
ನಿಮಗೆ ಕಫದ ಸಮಸ್ಯೆ ಇದ್ದಲ್ಲಿ, ಚಿನ್ನದ ಹಾಲಿನ ಸೇವನೆ ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತದೆ. ಏಕೆಂದರೆ ಇದರಲ್ಲಿ ಕಾಳುಮೆಣಸಿನ ಪುಡಿ ಇದ್ದು, ಇದು ಕಫದ ಸಮಸ್ಯೆ ನಿವಾರಿಸುವಲ್ಲಿ ಸಹಕಾರಿಯಾಗಿದೆ.
ರಾತ್ರಿ ಮಲಗುವ ಮುನ್ನ ಚಿನ್ನದ ಹಾಲು ಸೇವಿಸಿದರೆ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ.
ಈ ಹಾಲಿನಲ್ಲಿ ಕ್ಯಾಸೀನ್ ಎಂಬ ಪ್ರೊಟೀನ್ ಇದ್ದು, ದಿನವಿಡಿ ಕೆಲಸದ ಒತ್ತಡದಿಂದ ಕಳೆದುಕೊಂಡ ಶಕ್ತಿಯನ್ನ ಪುನಃ ಗಳಿಸುವಲ್ಲಿ ಸಹಾಯಕವಾಗಿದೆ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ