ಮಸ್ಕ್‌ಮೆಲನ್ ಅಂದ್ರೆ ಕರ್ಬೂಜ ಹಣ್ಣು.. ಬೇಸಿಗೆಯಲ್ಲಿ ಕಲ್ಲಂಗಡಿ, ಬಾಳೆಹಣ್ಣು, ದ್ರಾಕ್ಷಿ ಎಷ್ಟು ದೇಹಕ್ಕೆ ತಂಪು ನೀಡುವ ಕೆಲಸ ಮಾಡುತ್ತದೋ ಅಷ್ಟೇ ತಂಪನ್ನ ದೇಹಕ್ಕೆ ನೀಡುವ ಕೆಲಸ ಕರ್ಬೂಜ ಹಣ್ಣು ಕೂಡ ಮಾಡುತ್ತದೆ.
ಇದರ ಜ್ಯೂಸ್, ಮಿಲ್ಕ್ ಶೇಕ್, ಐಸ್ ಕ್ರೀಮ್ ಸಖತ್ ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಬನ್ನಿ ರುಚಿಕರ ಮತ್ತು ಆರೋಗ್ಯಕರ ಅಂಶವನ್ನು ಹೊಂದಿದ ಮಸ್ಕ್‌ಮೆಲನ್ ಹಣ್ಣಿನ ಉಪಯೋಗವೇನು ನೋಡೋಣ..
ತೂಕ ಇಳಿಸುವಲ್ಲಿ ಮಸ್ಕ್‌ಮೆಲನ್ ಹಣ್ಣು ಸಹಕಾರಿಯಾಗಿದೆ. ಈ ಹಣ್ಣು ಹೆಚ್ಚಿನ ಕ್ಯಾಲೋರಿ ಹೊಂದಿದ್ದು, ವಿಟಾಮಿನ್ ಸಿ ಅಂಶವನ್ನೂ ಹೊಂದಿರುತ್ತದೆ. ತೂಕ ಇಳಿಸಿಕೊಳ್ಳಲು ಇಚ್ಛಿಸಿದ್ದರೆ, ಊಟಕ್ಕೂ ಮೊದಲು ಒಂದು ಬೌಲ್ ಮಸ್ಕ್‌ಮೆಲನ್ ಸಲಾಡ್ ತಿನ್ನಿ. 10 ನಿಮಿಷದ ಬಳಿಕ ಊಟ ಮಾಡಿ. ಹೀಗೆ ಮಾಡುವುದರಿಂದ ಊಟದ ಪ್ರಮಾಣ ಕಡಿಮೆಯಾಗಿ, ಹಣ್ಣಿನ ಪ್ರಮಾಣ ಜಾಸ್ತಿಯಾಗಿ, ತೂಕ ಇಳಿಸಲು ಸಹಕಾರಿಯಾಗುತ್ತದೆ. ಇಲ್ಲಿ ಮುಖ್ಯವಾದ ವಿಷಯ ಅಂದ್ರೆ ಮಸ್ಕ್‌ಮೆಲನ್ ಹಣ್ಣಿನ ಸೇವನೆಯ ಬಳಿಕ ನೀರು ಕುಡಿಯುವಂತಿಲ್ಲ.
ಗರ್ಭಿಣಿ ಮಹಿಳೆಯರು ನಿಯಮಿತವಾಗಿ ಮಸ್ಕ್‌ಮೆಲನ್ ಹಣ್ಣಿನ ಸೇವನೆ ಮಾಡಿದರೆ ಉತ್ತಮ.
ಕರ್ಬೂಜ ಹಣ್ಣು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದು, ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.
ಕರ್ಬೂಜ ಹಣ್ಣಿನ ಸೇವನೆಯಿಂದ ಸೌಂದರ್ಯ ವೃದ್ಧಿಯಾಗುತ್ತದೆ. ಅಲ್ಲದೇ ಮಸ್ಕ್ ಮೆಲನ್ ಹಣ್ಣಿನಿಂದ ಫೇಸ್‌ಪ್ಯಾಕ್ ಕೂಡಾ ಹಾಕಿಕೊಳ್ಳಬಹುದು.
ಜೀರ್ಣಕ್ರಿಯೆಯಲ್ಲಿ ಮಸ್ಕ್‌ಮೆಲನ್ ಹಣ್ಣು ಸಹಕಾರಿಯಾಗಿರುವುದರಿಂದ ಇದನ್ನು ತಿಂದ ಬಳಿಕ ಮಲಗುವಂತಿಲ್ಲ. ಬದಲಾಗಿ ಸ್ವಲ್ಪ ವಾಕ್ ಮಾಡಿ. ಈ ಹಣ್ಣನ್ನ ಮಧ್ಯಾಹ್ನದ ಹೊತ್ತು ತಿನ್ನಿ. ರಾತ್ರಿಗಿಂತ ಮಧ್ಯಾಹ್ನ ಹಣ್ಣು ಹಂಪಲನ್ನ ಸೇವನೆ ಮಾಡುವುದು ಆರೋಗ್ಯಕ್ಕೆ ಹೆಚ್ಚು ಲಾಭಕಾರಿ ಎನ್ನಲಾಗುತ್ತದೆ.
ಮುಟ್ಟಿನ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಹೊಟ್ಟೆನೋವು, ಕಾಲು ನೋವು, ಸೊಂಟ ಮೈ ಕೈ ನೋವು ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತದೆ. ಅಲ್ಲದೇ ಆ ವೇಳೆ ಮೈಯಲ್ಲಿ ಉಷ್ಣತೆ ಜಾಸ್ತಿಯಾಗಿರುತ್ತದೆ. ಹೀಗೆ ದೇಹ ತಂಪು ಮಾಡಿ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಮಸ್ಕ್‌ಮೆಲನ್ ಹಣ್ಣು ಸೇವನೆ ಮಾಡಬೇಕು.
ನಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಿ, ಒಳ್ಳೆಯ ಕೊಲೆಸ್ಟ್ರಾಲ್‌ನ್ನ ದೇಹಕ್ಕೆ ಒದಗಿಸುವುದರಲ್ಲಿ ಮಸ್ಕ್‌ಮೆಲನ್ ಹಣ್ಣು ಸಹಕಾರಿಯಾಗಿದೆ.
ಕರ್ಬೂಜ ಹಣ್ಣಿನ ಸೇವನೆಯಿಂದ ನಿಮಗೆ ಅಲರ್ಜಿ ಆಗುವುದಿದ್ದಲ್ಲಿ ವೈದ್ಯರ ಬಳಿ ಸಲಹೆ ಪಡೆದು ಬಳಿಕ ಸೇವಿಸಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ