Bengaluru News: ಬೆಂಗಳೂರು: ಇದೇ ನವೆಂಬರ್ 12ರಂದು ಚಾನ್ಸಲ್ಲರಿ ಪೆವಿಲ್ಲಿಯನ್ ನಲ್ಲಿ ನಡೆಯಲಿರುವ ಮಹಿಳಾ ಉದ್ಯಮಿ ಸಾಧಕರಿಗೆ ನೀಡಲಾಗುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾದ ʼಟುಗೆದರ್ ವಿ ಗ್ರೋ 2025′ 4ನೇ ಆವೃತ್ತಿಯ ಸಮಾರೋಪ ಸಮಾರಂಭಕ್ಕೆ ಮಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಉಬುಂಟು ಮಹಿಳಾ ನಿಯೋಗದ ವತಿಯಿಂದ ಆಹ್ವಾನ ನೀಡಲಾಯಿತು.
ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಉಬುಂಟು ಸಂಸ್ಥಾಪಕಿ ಶ್ರೀಮತಿ ಕೆ. ರತ್ನಪ್ರಭಾ ಅವರು ಉಪಮುಖ್ಯಮಂತ್ರಿಗಳನ್ನ ಭೇಟಿಯಾಗಿ ಅಧಿಕೃತವಾಗಿ ಆಮಂತ್ರಣ ನೀಡಿದರು. ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಅಂತರಾಷ್ಟ್ರೀಯ ಮಹಿಳಾ ಉದ್ಯಮಿ ದಿನದ ಪ್ರಯುಕ್ತ ಭಾರತದಾದ್ಯಂತ ಉದ್ಯಮ, ನಾವೀನ್ಯತೆ ಮತ್ತು ನಾಯಕತ್ವದಲ್ಲಿ ಹೆಸರು ಮಾಡಿರುವ ಮಹಿಳಾ ಸಾಧಕರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
‘ಟುಗೆದರ್ ವಿ ಗ್ರೋ – 2025’ ಎಂಬುದು ಊಬಂಟು ಒಕ್ಕೂಟದ ವಾರ್ಷಿಕ ಕಾರ್ಯಕ್ರಮವಾಗಿದ್ದು, ಇದು ದೇಶಾದ್ಯಂತದ ಮಹಿಳಾ ಉದ್ಯಮಿಗಳು, ಉದ್ಯಮದ ನಾಯಕರು ಮತ್ತು ಬದಲಾವಣೆ ಬಯಸುವಂತಹ ಮಹಿಳೆಯರನ್ನು ಒಂದೇ ವೇದಿಕೆಯಲ್ಲಿ ಸೇರಿಸಲಾಗುತ್ತದೆ. ಈ 4ನೇ ಆವೃತ್ತಿಯ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ, ಜಾಗತಿಕ ಮಾರುಕಟ್ಟೆ ಪ್ರವೇಶ ಮತ್ತು ವಿವಿಧ ಕ್ಷೇತ್ರಗಳ ಯಶಸ್ಸಿನ ಕಥೆಗಳ ಕುರಿತು ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮುಖ್ಯವಾಗಿ ಗ್ರಾಮೀಣ, ನಗರ ಹಾಗೂ ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿನ ಅತ್ಯುತ್ತಮ ಮಹಿಳಾ ಸಾಧಕಿಯರಿಗೆ ಮೂರು ವಿಭಾಗಗಳಲ್ಲಿ (ಸ್ಟಾರ್ಟ್ ಅಪ್, ಎರಡನೇ ಇನ್ನಿಂಗ್ಸ್ ಮತ್ತು ಸ್ಕೇಲ್ ಅಪ್) ವಿಂಗಡಿಸಿ ಉಬುಂಟು ಸ್ಟಾರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದರ ಜೊತೆಗೆ ಉದ್ಯಮದ ಹಾದಿಯಲ್ಲಿ ನಾವೀನ್ಯತೆ, ಸ್ಥಿತಿಸ್ಥಾಪಕತ್ವ (Resilience) ಮತ್ತು ನಾಯಕತ್ವವನ್ನು ಬಿಂಬಿಸಿದ ನೂತನ ಸಾಧಕರನ್ನು ಗುರುತಿಸಿ ಉಬುಂಟು ಜೆಮ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಉಬುಂಟು ನಿಯೋಗ
ಉಬುಂಟು ನಿಯೋಗವು ರಾಜ್ಯದಾದ್ಯಂತ ಈಗಾಗಲೇ 3000 ಮಹಿಳಾ ಉದ್ಯಮಿಗಳಿಗೆ ತರಬೇತಿ ನೀಡಲಾಗಿದ್ದು, 2027ರ ವೇಳೆಗೆ 10,000 ಮಹಿಳೆಯರನ್ನು ತಲುಪುವ ಗುರಿಯನ್ನು ಹೊಂದಿದೆ.

