Bengaluru News: ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಅಧಿಕಾರಿಗಳನ್ನು ಕಾಲ ಕಾಲಕ್ಕೆ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಇದು ಎಲ್ಲ ಇಲಾಖೆಗಳಿಗೂ ಅನ್ವಯವಾಗುತ್ತದೆ, ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಇದಕ್ಕೆ ಅವಕಾಶವೇ ಇಲ್ಲವೇನೊ.. ಆದ್ಯಾಗೂ ಇದ್ದರೂ ಕೂಡ ಅದು ಡೋಂಟ್ ಕೇರ್ ಅನ್ನೋ ರೀತಿಯಲ್ಲಿಯೇ ಇರುವುದು ಕಂಡು ಬಂದಿದೆ.
ಇನ್ನೂ ಈ ಇಲಾಖೆಯು ಸೇರಿದಂತೆ ಇದರ ಅಧೀನ ನಿರ್ದೇಶನಾಲಯಗಳಲ್ಲಿ ಕಳೆದ 2024ರ ನವೆಂಬರ್ ತಿಂಗಳಲ್ಲಿ ಸರ್ಕಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಅಲ್ಲದೆ ಆಗ ಸರ್ಕಾರದಿಂದ ಟ್ರಾನ್ಸ್‌ಫರ್ ಆಗಿದ್ದ 97 ಸಿಬ್ಬಂದಿಗಳ ಪೈಕಿ ಸ್ವಲ್ಪ ಜನರನ್ನು ಸ್ಥಳ ನಿಯುಕ್ತಿ ಮಾಡಿ ಕೆಲಸಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಆದರೆ 49 ಜನರಿಗೆ ಆಗಿನಿಂದಲೂ ಯಾವುದೇ ಸ್ಥಳಗಳನ್ನು ತೋರಿಸಿರಲಿಲ್ಲ, ಅವರು ಇದುವರೆಗೂ ಸಹ ಕೆಲಸವಿಲ್ಲದೆ ಪರದಾಟ ಅನುಭವಿಸುತ್ತಿದ್ದಾರೆ. ಇಂದೋ..ನಾಳೆ ನಮಗೆ ಸ್ಥಳ ನಿಯುಕ್ತಿ ಮಾಡಿ ಇಲಾಖೆಯು ಕೆಲಸಕ್ಕೆ ಕರೆಯಿಸಿಕೊಳ್ಳಬಹುದೆಂದು ಜಾತಕ ಪಕ್ಷಿಯಂತೆ ದಿನಗಳನ್ನು ಎದುರು ನೋಡುತ್ತಿದ್ದಾರೆ.
ಸ್ಥಳ ನಿಯಕ್ತಿಯಾಗದೆ ಪರದಾಟ..
ಅಲ್ಲದೆ ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಯೋಜನೆಯಾಗಿರುವ ಗೃಹ ಲಕ್ಮ್ಮಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಶ್ರಮಿಸಿದ್ದ ಇಲಾಖೆಯ ಈ ಸ್ಥಳ ನಿಯುಕ್ತಿಯಾಗದ ಸಿಬ್ಬಂದಿಗಳಿಗೆ ಅನೇಕ ತಿಂಗಳುಗಳಾದರೂ ಸಹ ಸಂಬಳ ನೀಡಿಲ್ಲ. ಇದೀಗ ಆ ಸಿಬ್ಬಂದಿ ಇತ್ತ ಕೆಲಸವೂ ಇಲ್ಲ, ಅತ್ತ ಸಂಬಳವೂ ಇಲ್ಲ ಎನ್ನುವಂತ ಸ್ಥಿತಿಗೆ ತಲುಪಿದ್ದಾರೆ. ಇನ್ನೂ ಒಟ್ಟು 1,230 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು 30 ಆದೇಶಗಳನ್ನು ಹೊರಡಿಸುವ ಮೂಲಕ ವರ್ಗ ಮಾಡಿದ್ದ ಇಲಾಖೆಯು ಅದರಲ್ಲಿಯೂ 102 ಜನರಿಗೆ ಸ್ಥಳ ತೋರಿಸಿರಲಿಲ್ಲ. ಅಲ್ಲದೆ ಇದರಲ್ಲಿರುವ ಕೆಲವು ಸಿಬ್ಬಂದಿಗಳಿಗೆ ಹೆಚ್ಚುವರಿ ಆದೇಶ ನೀಡುವುದರ ಜೊತೆಗೆ ಕೆಲಸಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ 86 ಜನರು ಯಾವುದೇ ಕೆಲಸವಿಲ್ಲದೆ ದಿನಗಳನ್ನು ದೂಡುತ್ತಿದ್ದಾರೆ.
ಕಾಸಿಲ್ಲದೆ ಯಾವ ಕೆಲ್ಸಾನೂ ಇಲ್ಲ..!
ಅಂದಹಾಗೆ ಸರ್ಕಾರದಲ್ಲಿ ಈ ಆದೇಶಗಳನ್ನು ಹೊರಡಿಸಲಾಗುತ್ತದೆ, ಆದರೆ ಅದರ ಪಾಲನೆ ಎಷ್ಟಾಗುತ್ತದೆ..? ಎನ್ನುವ ಪ್ರಶ್ನೆ ಮೂಡುತ್ತಿದೆ. ಪ್ರಮುಖವಾಗಿ ಇಲ್ಲಿ ಇತರ ಇಲಾಖೆಗಳಂತೆ ಅಧಿಕಾರಿಗಳಿಗೆ ಮುಂಬಡ್ತಿ ಹಾಗೂ ವರ್ಗಾವಣೆಯ ಆದೇಶ ನೀಡಲಾಗುತ್ತದೆ. ಆದರೆ ಸ್ಥಳವನ್ನು ಮಾತ್ರ ನಿಗದಿ ಮಾಡುವುದಿಲ್ಲ. ಅದಕ್ಕೆ ಕಾರಣವನ್ನು ತಿಳಿಯಲು ಹೋದರೆ ಅಲ್ಲಿನ ಭ್ರಷ್ಟ ವ್ಯವಸ್ಥೆ ಹಾಗೂ ಲಂಚಬಾಕತನ ಎನ್ನುವುದು ಇನ್ನಷ್ಟು ಅಚ್ಚರಿ ಮೂಡುವಂತೆ ಮಾಡುತ್ತದೆ. ಅಷ್ಟಕ್ಕೂ ಇಲ್ಲಿ ಸ್ಥಳ ನಿಯುಕ್ತಿಗೊಳಿಸಬೇಕಾದರೆ ಲಂಚ ನೀಡಿದರೆ ಮಾತ್ರ ಎರಡೇ ದಿನದಲ್ಲಿ ಕೆಲಸ ನೀಡಲಾಗುತ್ತದಂತೆ ಎಂಬ ಆರೋಪ ಇಲಾಖೆಯಲ್ಲಿ ಕೇಳಿ ಬರುತ್ತಿದೆ.
ಹಣ ಮಾಡುವ ದಂಧೆಯ ಆರೋಪ..?
ಇನ್ನೂ ಕಳೆದ ವರ್ಗಾವಣೆಯ ಆದೇಶವನ್ನು ಹೊರಡಿಸಿ ಮತ್ತೆ ವಾಪಸ್ ಕೂಡ ಪಡೆಯಲಾಗುತ್ತದೆ. ಅಂದರೆ ಕಳೆದ 2024ರ ಜುಲೈ ತಿಂಗಳಲ್ಲಿ ಹೊರಡಿಸಿದ್ದ 2 ಆದೇಶಗಳಲ್ಲಿ ಒಟ್ಟು 116 ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಟ್ರಾನ್ಸ್‌ಫರ್ ಮಾಡಲಾಗಿತ್ತು.ಇದಾದ ಕೇವಲ 5 ದಿನಗಳ ಬಳಿಕ ಮತ್ತೊಂದು ಆದೇಶ ನೀಡಿ ಆ ವರ್ಗಾವಣೆಗೆ ಬ್ರೇಕ್ ಹಾಕಲಾಗುತ್ತದೆ. ಇಲಾಖೆಯಲ್ಲಿನ ಉನ್ನತ ಅಧಿಕಾರಿಗಳು ವರ್ಗಾವಣೆಗಳಿಂದ ಹಣ ಗಳಿಸಲು ಈ ರೀತಿಯಾಗಿ ಟ್ರಿಕ್ಸ್ ಪಾಲಿಸುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ನಿಯುಕ್ತಗೊಳಿಸಲಾಗಿದ್ದ ಸ್ಥಳದಿಂದ ವಾಪಸ್ ಬರುವಂತೆ ಆದೇಶದಲ್ಲಿ ಸೂಚಿಸಿ ಮೊದಲಿನ ಸ್ಥಳಗಳಲ್ಲಿ ಸಿಬ್ಬಂದಿಗಳು ಉಳಿಯುವಂತೆ ಮಾಡಲಾಗಿತ್ತು. ಅಲ್ಲದೆ ಈ ರೀತಿಯಾಗಿ ಮಾಡುವ ಮೂಲಕ ಇದನ್ನೇ ಒಂದು ದೊಡ್ಡ ಬ್ಯುಸಿನೆಸ್ ಆಗಿ ಅಲ್ಲಿನ ಉನ್ನತ ಮಟ್ಟದ ಅಧಿಕಾರಿಗಳು ಮಾಡಿಕೊಂಡಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೆ ಪ್ರಮುಖವಾಗಿ ಇದಕ್ಕೆಲ್ಲ ಕಾರಣವೆಂದರೆ ಇಲಾಖೆಯ ಮಂತ್ರಿಗಳ ಅತ್ಯಾಪ್ತ ವಲಯಕ್ಕೆ ಸೇರಿರುವ ಒಬ್ಬ ಹೈಯರ್ ಆಫೀಸರ್ ಅವರ ಮಾತಿನಂತೆ ಈ ಹಣ ಮಾಡುವ ಕೆಲಸ ನಡೆಯುತ್ತದೆಂಬ ಶಾಕಿಂಗ್ ಮಾಹಿತಿಯನ್ನು ಇಲಾಖೆಯ ಮೂಲಗಳೇ ಹೊರಗೆಡವಿವೆ.
ಅಲ್ಲದೆ ಹೀಗೆ ಸ್ಥಳ ನಿಯುಕ್ತಿಗೊಳ್ಳದವರು ಇಲಾಖೆಯ ಕಚೇರಿಗೆ ಅಥವಾ ನಿರ್ದೇಶನಾಲಯಕ್ಕೆ ಹೋಗಿ ಸಹಿ ನೀಡಬೇಕು. ಅಂದಾಗಲೇ ಸ್ಥಳವನ್ನು ತೋರಿಸಲಾಗುತ್ತದೆ, ಇದರ ಬಳಿಕವೇ ಸಂಬಳ ನೀಡಲಾಗುತ್ತಂತೆ. ಒಂದು ವೇಳೆ ಸಹಿ ಮಾಡದ ಸಿಬ್ಬಂದಿಗೆ ವೇತನವೇ ರಿಲಿಸ್ ಆಗುವುದಿಲ್ಲ ಎನ್ನುವುದು ಇಲ್ಲಿನ ಗೋಳಾಗಿದೆ.
ನಮಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ..
ಇನ್ನೂ ನಮ್ಮಲ್ಲಿ ಈ ಸ್ಥಳ ನಿಯುಕ್ತಿಯಾಗದವರು ಹಾಗೂ ಅವರಲ್ಲಿನ ಸಂಬಳ ಬಾಕಿ ಇರುವವರ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಹೇಳಿದೆ. ಅಲ್ಲದೆ ಗ್ರೂಪ್-ಎ ಅಧಿಕಾರಿಗಳ ಮಾಹಿತಿ ಮಾತ್ರ ನಮ್ಮ ಬಳಿ ಇದೆ. ಅದರೆ ಸಿ ಮತ್ತು ಡಿ ದರ್ಜೆಯ ಸಿಬ್ಬಂದಿಗಳದ್ದು ವಿವಿಧ ನಿರ್ದೇಶನಾಯಗಳ ಅಡಿಯಲ್ಲಿ ಬರುತ್ತದೆ ಅದಕ್ಕೆ ಸಂಬಂಧಿಸಿದ ವಿವರ ನಮ್ಮ ಹತ್ತಿರವಿಲ್ಲ. ಆದರೆ ಹುದ್ದೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಸ್ಥಳ ನಿಯುಕ್ತಿಗೊಂಡ ನಂತರವೇ ಸಂಬಳ ನೀಡುವುದು ನಿಯಮವಾಗಿದೆ. ಈ ವೇತನ ಪಾವತಿಯ ಮಾಹಿತಿ ನಮ್ಮ ಬಳಿ ಲಭ್ಯವಿಲ್ಲ ಎಂದು ಇಲಾಖೆಯು ಆರ್‌ಟಿಐ ಒಂದಕ್ಕೆ ಉತ್ತರ ನೀಡಿದೆ.