Bengaluru News: ಪಿವಿಆರ್ ಸಂಸ್ಕೃತಿ ಬಂದ ಮೇಲೆ ಬಹುತೇಕ ಜನರ ಲೈಫ್ ಸ್ಟೈಲ್ ಬದಲಾಗಿದ್ದು ಸುಳ್ಳಲ್ಲ. ಮಧ್ಯಮ ವರ್ಗ ಕೂಡ ಅದಕ್ಕೆ ತಕ್ಕಂತೆ ಕುಣಿಯತೊಡಗಿದ್ದೂ ಹೌದು. ಆದರೆ, ಎಲ್ಲೋ ಒಂದು ಕಡೆ ಪಿವಿಆರ್ ಗೆ ಸಿನಿಮಾ ನೋಡಲು ಹೋಗುವ ಸಿನಿಪ್ರಿಯರಿಗೆ ಸಾಕಷ್ಟು ಕಿರಿಕಿರಿ ಆಗುತ್ತಿದ್ದದ್ದು ನಿಜ. ಆ ಬಗ್ಗೆ ಆಗಾಗ ವರದಿ ಆಗಿದ್ದರೂ, ದೂರು ಬಂದಿದ್ದರೂ ಏನೂ ಪ್ರಯೋಜನವಾಗುತ್ತಿರಲಿಲ್ಲ. ಈಗ ಸಿನಿಪ್ರೇಮಿಯೊಬ್ಬ ಸಿನಿಮಾ ನೋಡಲು ಹೋದಾಗ ಸ್ಕ್ರೀನ್ ಮೇಲೆ ಅತೀ ಹೆಚ್ಚು ಜಾಹಿರಾತು ತೋರಿಸಿ, ಸಮಯ ವ್ಯರ್ಥ ಮಾಡಿದ್ದರಿಂದ ಅದೇ ಕಾರಣಕ್ಕೆ ಪಿವಿಆರ್ ಮೇಲೆ ಕೇಸು ದಾಖಲಿಸಿ, ದಂಡ ಕಟ್ಟುವಂತೆ ಮಾಡಿದ್ದಾರೆ.
ಸಾಮಾನ್ಯವಾಗಿ ಪಿವಿಆರ್ ಅಥವಾ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ನೋಡಲು ಹೋಗುವ ಪ್ರೇಕ್ಷಕರಿಗೆ ಅನಗತ್ಯವಾಗಿ ಕಿರಿಕಿರಿ ಆಗೋದು ಸಹಜ. ಕಿರಿಕಿರಿ ಅಂದರೆ, ಸ್ಕ್ರೀನ್ ಮೇಲೆ ಜಾಹಿರತಾ ಪ್ರದರ್ಶನ ಆಗುತ್ತೆ. ಪ್ರದರ್ಶನ ಆಗಲಿ ಆದರೆ, ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತೆ ಅನ್ನೋದೇ ನೋಡುಗರ ವಾದ. ಅನಗತ್ಯವಾಗಿ ಹೆಚ್ಚು ಸಮಯ ಇರುವ ಜಾಹೀರಾತುಗಳನ್ನು ತೋರಿಸಲಾಗುತ್ತೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ 20 ನಿಮಿಷಗಳ ಕಾಲ ಜಾಹೀರಾತು ಪ್ರದರ್ಶನವಾಗುತ್ತೆ. ಸಹಜವಾಗಿಯೇ ನೋಡುಗರಿಗೆ ಅದು ತಲೆನೋವುಂಟು ಮಾಡುತ್ತೆ. ಅಲ್ಲಿಗೆ ಹೋಗೋದು ಸಿನಿಮಾ ನೋಡಿ ಎಂಜಾಯ್ ಮಾಡೋಕೆ. ಆದರೆ, ಇಲ್ಲ-ಸಲ್ಲದ ಜಾಹಿರಾತನ್ನು ಪ್ರದರ್ಶಿಸಿ ನೋಡುಗರ ನೆಮ್ಮದಿ ಹಾಳುಮಾಡುತ್ತೆ ಅನ್ನೋ ದೂರು ಬರುತ್ತಲೇ ಇತ್ತು. ಆದರೂ,ಪಿವಿಆರ್. ಕ್ಯಾರೇ ಅನ್ನುತ್ತಿರಲಿಲ್ಲ. ಈಗ ಬೆಂಗಳೂರಿನ ವ್ಯಕ್ತಿಯೊಬ್ಬರು ಹೆಚ್ಚು ಜಾಹಿರಾತು ಪ್ರದರ್ಶನ ಮಾಡುತ್ತೆ ಎಂಬ ಕಾರಣಕ್ಕೆ ಪಿವಿಆರ್ ಮೇಲೆ ಕೇಸು ಹಾಕಿದ್ದಾರೆ. ಅಷ್ಟೇ ಅಲ್ಲ, ದಂಡವೂ ಕಟ್ಟಿಸಿದ್ದಾರೆ.
ಪಿವಿಆರ್ ನಲ್ಲಿ ಸಿನಿಮಾ ನೋಡುವುದರ ಜೊತೆ ಭರಪೂರ ಜಾಹೀರಾತು ಕಣ್ತುಂಬಿಕೊಳ್ಳಬೇಕಾದ ಅನಿವಾರ್ಯತೆ ಪ್ರೇಕ್ಷಕರದ್ದು. ಸಿನಿಮಾ ನೋಡೋಕೆ ಪ್ರೇಕ್ಷಕರಿಂದ ನೂರಾರು, ಸಾವಿರಾರು ರುಪಾಯಿ ಪಡೆಯುವ ಪಿವಿಆರ್, ಅದರ ಜೊತೆ ಜಾಹೀರಾತು ಪ್ರದರ್ಶನದಿಂದ ಅಷ್ಟೇ ಮೊತ್ತದ ಲಾಭ ಪಡೆಯುತ್ತದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಜಾಹೀರಾತು ಪ್ರದರ್ಶಿಸುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಚರ್ಚೆಗಳು ನಡೆದರೂ ಆ ಕಿರಿಕಿರಿ ನಿಂತಿಲ್ಲ. ಇದರಿಂದ ಬೇಸತ್ತು ಸಿನಿಮಾ ವೀಕ್ಷಕನೊಬ್ಬ ದೂರು ನೀಡಿ, ದಂಡ ಕಟ್ಟಿಸುವಂತೆ ಮಾಡಿ ಎಲ್ಲರಿಂದಲೂ ಶಹಬ್ಬಾಸ್ ಗಿಟ್ಟಿಸಿಕೊಂಡಿದ್ದಾನೆ.
ಅಂದಹಾಗೆ, 2024 ರಲ್ಲಿ ಬಿಡುಗಡೆಯಾದ ‘ಸ್ಯಾಮ್ ಬಹದ್ಧೂರ್’ ಸಿನಿಮಾ ನೋಡಲು ಬೆಂಗಳೂರಿನ ಅಭಿಷೇಕ್ ಎಂಆರ್ ಎಂಬುವರು ಬುಕ್ ಮೈ ಶೋನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪಿವಿಆರ್-ಐನಾಕ್ಸ್ (ಈಗ ಎರಡು ಒಂದೇ) ಮಲ್ಟಿಪ್ಲೆಕ್ಸ್ ಗೆ ಹೋಗಿದ್ದರು. ಆದರೆ ಮಲ್ಟಿಪ್ಲೆಕ್ಸ್ ನವರು ಸತತವಾಗಿ ಜಾಹೀರಾತು ಹಾಕಿ ಬರೋಬ್ಬರಿ 25 ನಿಮಿಷ ತಡವಾಗಿ ಚಿತ್ರವನ್ನು ಶುರುಮಾಡಿದ್ದಾರೆ. ಇದರಿಂದ, ಅಭಿಷೇಕ್ ನಿಗದಿತ ಸಮಯಕ್ಕೆ ಕಚೇರಿಗೆ ವಾಪಸ್ ತೆರಳಲು ಸಾಧ್ಯವಾಗಿಲ್ಲ.
ಟಿಕೆಟ್ ಮೇಲೆ ನಮೂದಾಗಿದ್ದ ಸಿನಿಮಾದ ಶೋ ಸಮಯಕ್ಕೂ ನಿಜವಾಗಿ ಸಿನಿಮಾ ಅನ್ನು ಪ್ರಾರಂಭ ಮಾಡಿದ ಸಮಯಕ್ಕೂ ಭಾರೀ ಅಂತರವಿದ್ದ ಕಾರಣ ಹಾಗೂ ಅನವಶ್ಯಕವಾಗಿ ಅತಿಯಾಗಿ ಜಾಹೀರಾತು ತೋರಿಸಿ ತನ್ನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಅಭಿಷೇಕ್ ಅವರು ಗ್ರಾಹಕರ ವೇದಿಕೆಯಲ್ಲಿ ಕೇಸು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ , ಇದೀಗ ಪಿವಿಆರ್-ಐನಾಕ್ಸ್, ದೂರುದಾರ ಅಭಿಷೇಕ್ ಅವರಿಗೆ 28 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಮಹತ್ತರ ಆದೇಶ ನೀಡಿದೆ. ಅಲ್ಲದೆ, ಇನ್ನು ಮುಂದೆ ನಿಖರವಾಗಿ ಸಿನಿಮಾ ಶೋ ಪ್ರಾರಂಭ ಆಗುವ ಸಮಯವನ್ನೇ ಟಿಕೆಟ್ ನಲ್ಲಿ ನಮೂದಿಸಬೇಕು. ಜಾಹೀರಾತು ಪ್ರದರ್ಶಿಸುವ ಸಮಯವನ್ನು ನಮೂದಿಸುವಂತಿಲ್ಲ ಎಂದು ಗ್ರಾಹಕರ ವೇದಿಕೆ ಪಿವಿಆರ್-ಐನಾಕ್ಸ್ಗೆ ಸೂಚಿಸಿದೆ.
ಈ ಹಿಂದೆಯೂ ಕೂಡ ಪಿವಿಆರ್ ಮೇಲೆ ಇಂತಹ ಹಲವು ಪ್ರಕರಣಗಳು ದಾಖಲಾಗಿದ್ದವು. ಮಲ್ಟಿಪ್ಲೆಕ್ಸ್ ನಲ್ಲಿ ಹಲವಾರು ರೂಲ್ಸ್ ಗಳಿವೆ. ಹೊರಗಡೆಯಿಂದ ಆಹಾರ ತೆಗೆದುಕೊಂಡು ಹೋಗುವಂತಿಲ್ಲ. ನೀರನ್ನೂ ಕೊಂಡೊಯ್ಯುವಂತಿಲ್ಲ. ಅದಕ್ಕೆ ನಿರ್ಬಂಧ ಹೇರಲಾಗಿದೆ. ಇನ್ನು, ಅತಿಯಾಗಿ ಜಾಹೀರಾತು ಪ್ರದರ್ಶನ ಮಾಡುವ ಬಗ್ಗೆ ಕೂಡ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಪಿವಿಆರ್ ಮೇಲೆ ಹೂಡಲಾಗಿತ್ತು. ಆದರೆ ಯಾವ ಪ್ರಯೋಜನವಾಗಿರಲಿಲ್ಲ. ಈಗ ಸರಿಯಾದ ಪಾಠ ಕಲಿತಂತಾಗಿದೆ. ಈಗಲೂ ಸಹ ಬೆಂಗಳೂರು ಸೇರಿದಂತೆ ಕೆಲವು ಮಹಾನಗರಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಹೊರಗಿನಿಂದ ತೆಗೆದುಕೊಂಡು ಹೋಗುವ ಆಹಾರ ಮತ್ತು ನೀರು ನಿರ್ಬಂಧಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲ ಆಗುವ ರೀತಿ ಮಲ್ಟಿಪ್ಲೆಕ್ಸ್ ಇರಬೇಕು. ಆದರೆ, ಅವರು ಮಾಡಿದ್ದೇ ರೂಲ್ಸ್ ಗಳಿಂದ ತೊಂದರೆಯೇ ಹೆಚ್ಚು. ಇದರಿಂದ ನೋಡುವ ಪ್ರೇಕ್ಷಕನಿಗೆ ಹಣವೂ ಹೆಚ್ಚು, ಸಮಯವೂ ವ್ಯರ್ಥ. ಇನ್ನು ಮುಂದಾದರೂ, ಇದಕ್ಕೆ ಸಂಪೂರ್ಣ ಕಡಿವಾಣ ಬೀಳುತ್ತಾ ನೋಡಬೇಕು.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ