Saturday, July 27, 2024

Latest Posts

ದೇಶದ ಜಾಗೃತ ಮತದಾರರ ಮುಂದೆ ಬಿಜೆಪಿ, ಅದರ ತಥಾಕಥಿತ ನಾಯಕರೆಲ್ಲರೂ ಬತ್ತಲೆಯಾಗುತ್ತಿದ್ದಾರೆ: ಸಿಎಂ

- Advertisement -

Political Newsಲೋಕಸಭಾ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಭಾರತೀಯ ಜನತಾ ಪಕ್ಷ ಸ್ವಾಯತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೊದಲಾದವುಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಲು ಹೊರಟಿದೆ. ಈ ಹುನ್ನಾರದ ಭಾಗವಾಗಿಯೇ ನಮ್ಮ ಪಕ್ಷದ ವಿರುದ್ಧ ‘’ತೆರಿಗೆ ಭಯೋತ್ಪಾದನೆ’’ಯಲ್ಲಿ ತೊಡಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ರೀತಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಆ ಪಕ್ಷದ ಭ್ರಮೆ. ಕಾಂಗ್ರೆಸ್ ಪಕ್ಷದ ಮೇಲೆ ವರಮಾನ ತೆರಿಗೆ ಪಾವತಿ ಮಾಡದೆ ಇರುವ ಆರೋಪ ಹೊರಿಸಿ ರೂ.1,823 ಕೋಟಿ ಪಾವತಿಸುವಂತೆ ಐಟಿ ಇಲಾಖೆ ನೋಟೀಸ್ ನೀಡಿದೆ. 2017-18ರಲ್ಲಿ ಬಿಜೆಪಿ ಹೆಸರೇ ಇಲ್ಲದ 92 ದಾನಿಗಳಿಂದ ರೂ.4.5 ಲಕ್ಷ ಮತ್ತು ವಿಳಾಸವೇ ಇಲ್ಲದ 1297 ದಾನಿಗಳಿಂದ ರೂ.42 ಕೋಟಿ ದೇಣಿಗೆ ಪಡೆದಿರುವುದನ್ನು ನಮ್ಮ ಪಕ್ಷದ ನಾಯಕರು ಬಯಲಿಗೆಳೆದಿದ್ದಾರೆ. ನಮ್ಮ ಪಕ್ಷಕ್ಕೆ ಅನ್ವಯಿಸಿದ ಮಾನದಂಡವನ್ನೇ ಅನ್ವಯಿಸಿದರೆ ಬಿಜೆಪಿ ಕಳೆದ ಏಳು ವರ್ಷಗಳಲ್ಲಿ ನಡೆಸಿರುವ ತೆರಿಗೆ ಉಲ್ಲಂಘನೆಗಾಗಿ ರೂ.4,263 ಕೋಟಿ ಪಾವತಿಸಬೇಕಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಬಾಂಡ್ ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಆಡಳಿತಾರೂಢ ಬಿಜೆಪಿ ಸುಲಿಗೆ ಮಾಡಿರುವುದು ಜಗಜ್ಜಾಹೀರಾಗಿದೆ. ಬಯಲಾಗಿರುವ ಈ ಹಗರಣದಿಂದ ಜನರ ಗಮನ ಬೇರೆ ಕಡೆ ಸೆಳೆಯುವ ಜೊತೆಯಲ್ಲಿ ವಿರೋಧ ಪಕ್ಷಗಳನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ವರಮಾನ ತೆರಿಗೆ ವಂಚನೆಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಮೊದಲಾದ ಬ್ಯಾಂಕ್ ವಂಚಕರ 10.09 ಲಕ್ಷ ಕೋಟಿ ರೂಪಾಯಿಯಷ್ಟು ಬ್ಯಾಂಕ್ ಸಾಲವನ್ನು‌ ಮನ್ನಾ ಮಾಡಿರುವ ನರೇಂದ್ರಮೋದಿ ಸರ್ಕಾರ ಅವರಿಂದ ಪಡೆದಿರುವ ಕಮಿಷನ್ ಹಣ ಎಷ್ಟು ಎನ್ನುವುದನ್ನು ದೇಶದ ಜನತೆಗೆ ತಿಳಿಸಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ನಿಜವಾದ ಶಕ್ತಿ ಹಣದ ಬಲ ಅಲ್ಲ, ಜನ ಬಲ. ಬಿಜೆಪಿಯಲ್ಲಿ ಹಣ ಬಲ ಇದ್ದರೆ ನಮ್ಮಲ್ಲಿ ಜನಬಲ ಇದೆ. ತೆರಿಗೆ ವಂಚಕರು, ಬ್ಯಾಂಕ್ ಗಳನ್ನು ಮುಳುಗಿಸಿದವರು, ಗಣಿ ಲೂಟಿಕೋರರು, ಕಾಳಸಂತೆಕೋರರು, ಕಳ್ಳ-ಖದೀಮರೇ ಬಿಜೆಪಿಯ ಬಲ. ಬಿಜೆಪಿ ಅಂದ್ರೆ ಭ್ರಷ್ಟರ ಹಣವನ್ನು ನುಂಗಿ ಅವರಿಗೆ ಪ್ರಾಮಾಣಿಕತೆಯ ಸರ್ಟಿಫಿಕೇಟ್ ನೀಡುವ ವಾಷಿಂಗ್‌ ಮೆಶಿನ್‌ ಆಗಿದೆ. ಭ್ರಷ್ಟರು ತಾವು ಮಾಡಿದ ಮಹಾಪಾಪಗಳ ಮೇಲಿನ ತನಿಖೆಯಿಂದ ತಪ್ಪಿಸಿಕೊಳ್ಳಬೇಕಾದರೆ, ಶಿಕ್ಷೆಯಿಂದ ಪಾರಾಗಬೇಕಾದರೆ ಬಿಜೆಪಿ ಸೇರಿಕೊಂಡರೆ ಸಾಕು, ಪಾಪಗಳೆಲ್ಲವೂ ತನ್ನಿಂತಾನೆ ಶುದ್ಧವಾಗುತ್ತದೆ. ಅಲ್ಲಿದ್ದುಕೊಂಡು ಎಷ್ಟು ಬೇಕಾದರೂ ಭ್ರಷ್ಟಾಚಾರ ಮಾಡಬಹುದು, ಜನರ ಹಣ ಲೂಟಿ ಮಾಡಬಹುದು. ಅವರ ಮೇಲೆ ಯಾವ ಕೇಸೂ ದಾಖಲಾಗುವುದಿಲ್ಲ. ಯಾವ ತನಿಖಾ ಸಂಸ್ಥೆಯೂ ಹುಡುಕಿಕೊಂಡು ಬರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅತಿಕ್ರಿಯಾಶೀಲವಾಗಿರುವ ಐಟಿ ಇಲಾಖೆ ಟಿಎಂಸಿ, ಸಿಪಿಐ ಸೇರಿದಂತೆ ಬೇರೆ ವಿರೋಧ ಪಕ್ಷಗಳ ಮೇಲೆಯೂ “ತೆರಿಗೆ ಭಯೋತ್ಪಾದನೆ”ಯ ಅಸ್ತ್ರ ಪ್ರಯೋಗ ಮಾಡಿದೆ. ವಿರೋಧ ಪಕ್ಷಗಳ ಮೇಲೆ ಮುಗಿ ಬಿದ್ದಿರುವ ಐಟಿ ಇಲಾಖೆ ಬಿಜೆಪಿ ಯ ತೆರಿಗೆ ಉಲ್ಲಂಘನೆ ಬಗ್ಗೆ ಮಾತ್ರ ಕುರುಡಾಗಿದೆ. ಐಟಿ ಇಲಾಖೆಯ ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು? ಎನ್ನುವುದನ್ನು ತಿಳಿಯದಷ್ಟು ದೇಶದ ಜನತೆ ದಡ್ಡರಲ್ಲ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಡೈರಿಗಳೆಂದು ಹೇಳಲಾದ ದಾಖಲೆಪತ್ರಗಳನ್ನು ಮುಂದಿಟ್ಟುಕೊಂಡು ತೆರಿಗೆ ಉಲ್ಲಂಘನೆಯ ಆರೋಪ ಮಾಡುತ್ತಿರುವ ಐಟಿ ಇಲಾಖೆಗೆ, ಕರ್ನಾಟಕದಲ್ಲಿಯೇ ಬಯಲಾಗಿದ್ದ ಬಿಎಸ್‌ವೈ ಡೈರಿಗಳಾಗಲಿ, ನರೇಂದ್ರಮೋದಿ ಅವರೂ ಫಲಾನುಭವಿ ಎಂದು ಆರೋಪಿಸಲಾಗಿರುವ ‘’ಬಿರ್ಲಾ-ಸಹಾರಾ’’ ಡೈರಿಯಾಗಲಿ ಯಾಕೆ ಕಣ್ಣಿಗೆ ಬಿದ್ದಿಲ್ಲ? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಮತ್ತು ಅಧಿಕಾರವನ್ನು ಉಳಿಸಿಕೊಂಡಿದ್ದೇ ಕಳ್ಳ-ಖದೀಮರ ಲೂಟಿಯ ಹಣದಿಂದ. ಇದಕ್ಕೆ ಉತ್ತಮ ಉದಾಹರಣೆ ಕರ್ನಾಟಕದಲ್ಲಿ ನಡೆಸುತ್ತಾ ಬಂದ ಆಪರೇಷನ್ ಕಮಲ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಎದೆ ತಟ್ಟಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರಮೋದಿ ಅವರು ವಿರೋಧ ಪಕ್ಷಗಳನ್ನು ಹಣಿಯಲು ಈ ರೀತಿಯ ಅಕ್ರಮ ಕೃತ್ಯಗಳಿಗೆ ಇಳಿದಿರುವುದನ್ನು ನೋಡಿದರೆ ಅವರಿಗೆ ಗೋಡೆ ಮೇಲಿನ ಬರಹ ಸ್ಪಷ್ಟವಾಗಿ ಕಾಣತೊಡಗಿದೆ ಎಂದರ್ಥ. ಅರಸನ ಮೈಮೇಲಿನ ಬಟ್ಟೆ ಒಂದೊಂದಾಗಿ ಕಳಚಿ ಬೀಳುತ್ತಿದೆ. ದೇಶದ ಜಾಗೃತ ಮತದಾರರ ಮುಂದೆ ಬಿಜೆಪಿ ಮತ್ತು ಅದರ ತಥಾಕಥಿತ ನಾಯಕರೆಲ್ಲರೂ ಬತ್ತಲೆಯಾಗುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಬ್ಯಾಡ್ಮಿಂಟನ್ ತಾರೆ ಸೈನಾ

ಇದ್ರು ,ಹೋದ್ರು ನನಗೆ ಮಂಡ್ಯ ಸಾಕು. ಸ್ವಾರ್ಥ ಅನ್ನೋದು ಇದ್ರೆ ಮಂಡ್ಯ ಮಾತ್ರ: ಸಂಸದೆ ಸುಮಲತಾ ಅಂಬರೀಷ್

ಹಾಸನದಲ್ಲಿ ಹಿಟ್ ಅಂಡ್ ರನ್‌ಗೆ ಮಾವ-ಅಳಿಯ ಬಲಿ

- Advertisement -

Latest Posts

Don't Miss