Bengaluru News: ಮೆಟ್ರೋ ಕಾಮಗಾರಿಗಾಗಿ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ಗರ್ಡರ್ ಉರುಳಿ ಬಿದ್ದು ಆಟೋ ಚಾಲಕ ಸಾವನ್ನಪ್ಪಿರುವ ಘಟನೆ ಕೋಗಿಲು ಕ್ರಾಸ್ ಬಳಿ ಮಂಗಳವಾರ ರಾತ್ರಿ ನಡೆದಿತ್ತು. ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ 35 ವರ್ಷ ವಯಸ್ಸಿನ ಖಾಸೀಂ ಸಾಬ್ ನಿಧನರಾಗಿದ್ದರು. ಇದೀಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಸಂಸದ ಪಿ.ಸಿ. ಮೋಹನ್ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡದ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಮೆಟ್ರೊ ರೈಲು ನಿಗಮಿತ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇನ್ನೂ ಈ ಕುರಿತು ನಮ್ಮ ಮೆಟ್ರೊ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರಿಗೆ ಪತ್ರ ಬರೆದು, ಈಗಾಗಲೇ ಅನೇಕ ಹೃದಯ ವಿದ್ರಾವಕ ಘಟನೆಗಳ ಬಳಿಕ ಆಟೋ ಚಾಲಕನೊಬ್ಬನ ಸಾವಿಗೆ ಕಾರಣವಾದ ದುರಂತ ಘಟನೆಯನ್ನು ಬಹಳ ದುಖಃಕರವಾಗಿದೆ. ಸುರಕ್ಷತಾ ನಿಯಮಗಳನ್ನು, ಅದರ ಶಿಷ್ಟಾಚಾರಗಳನ್ನು ಅನುಸರಿಸಲು ಬಿಎಂಆರ್‌ಸಿಎಲ್ ವಿಫಲವಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದು ಕಿಡಿ ಕಾರಿದ್ದಾರೆ. ಇಷ್ಟಾದರೂ ಸಹ ಮೆಟ್ರೊ ಆಡಳಿತ ಮಂಡಳಿ ಕರ್ತವ್ಯಲೋಪವೆಸಗಿದ ಗುತ್ತಿಗೆದಾರರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳುವಲ್ಲೂ ತನ್ನ ವೈಫಲ್ಯ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಉದಾಸೀನತೆಯು ಅಸುರಕ್ಷತೆಗೆ ನೀಡಿರುವ ಅವಕಾಶಕ್ಕೆ ಸಮನಾಗಿರುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಈ ಕೂಡಲೇ ಪೊಲೀಸರಿಗೆ ದೂರು ನೀಡಬೇಕು ಎಂದು ಪಿ.ಸಿ. ಮೋಹನ್ ತಮ್ಮ ಪತ್ರದಲ್ಲಿ ಮೆಟ್ರೊ ಎಂಡಿ ಮಹೇಶ್ವರ್ ರಾವ್ ಅವರಿಗೆ ಒತ್ತಾಯಿಸಿದ್ದಾರೆ.
ಏನಿದು ಘಟನೆ..?
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೊ ನೀಲಿ ಮಾರ್ಗದ ಕಾಮಗಾರಿಗೆ ಬಳಸಲು ಟ್ರಕ್‌ನಲ್ಲಿ ಗರ್ಡರ್ ಸಾಗಿಸುತ್ತಿದ್ದ ವೇಳೆ ಉರುಳಿ ಬಿದ್ದು ಆಟೊ ಚಾಲಕ ಮೃತಪಟ್ಟ ಘಟನೆ ಕೋಗಿಲು ಕ್ರಾಸ್ ಬಳಿ ಕಳೆದೆರಡು ದಿನಗಳ ಹಿಂದೆ ನಡೆದಿತ್ತು. ಗರ್ಡರ್ ಸಾಗಿಸುತ್ತಿದ್ದ ಟ್ರಕ್‌ಗೆ ವಾಹನವೊಂದು ಏಕಾಏಕಿ ಅಡ್ಡಬಂದಿತ್ತು. ಆ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಕಾರಣ ಗರ್ಡರ್ ಉರುಳಿ ಆಟೊ ಮೇಲೆ ಬಿದ್ದಿದೆ. ಈ ವೇಳೆ ಆಟೊದಲ್ಲಿದ್ದ ಪ್ರಯಾಣಿಕರೊಬ್ಬರು ಅಪಾಯದ ಮುನ್ಸೂಚನೆ ಅರಿತು ಕೂಡಲೇ ಕೆಳಗಿಳಿದಿದ್ದರು. ಆದರೆ, ಚಾಲಕ ಖಾಸೀಂ ಸಾಬ್ ವಾಹನದಿಂದ ಇಳಿಯುವಷ್ಟರಲ್ಲಿ ಗರ್ಡರ್ ಆಟೊ ಮೇಲೆ ಬಿದ್ದಿತ್ತು. 150 ಅಡಿ ಉದ್ದದ ಗರ್ಡರ್ ಸುಮಾರು 70 ಟನ್ ತೂಕವಿದೆ. ವಾಡಿಯಾರ್‌ಪುರ ಕಾಸ್ಟಿಂಗ್ ಯಾರ್ಡ್‌ನಿಂದ 18 ಚಕ್ರಗಳ ಟ್ರಕ್‌ನಲ್ಲಿ ಗರ್ಡರ್ ಸಾಗಿಸಲಾಗುತ್ತಿತ್ತು.