ನವದೆಹಲಿ : ಕೇಂದ್ರ ಚುನಾವಣಾ ಆಯೋಗ (Central Election Commission)ದೇಶಾದ್ಯಂತ ಸಿ-ವಿಜಿಲ್(cVIGIL) ಆ್ಯಪ್ ಅನ್ನು ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ದೂರು ನೀಡಲೆಂದೇ ಜಾರಿಗೆ ತಂದಿದೆ. ಸ್ಮಾರ್ಟ್ ಫೋನ್(Smartphone) ನಲ್ಲಿ ಗೂಗಲ್ ಪ್ಲೇ(Google Play)ನಲ್ಲಿ ಸಿ- ವಿಜಿಲ್ ಆ್ಯಪ್ ಡೌನ್ ಲೋಡ್ ಮಾಡ್ಕೊಂಡು ಬಳಿಕ, ಅಕ್ರಮ ನಡೆಯುವ ಸ್ಥಳದ ಫೋಟೋ ಅಥವಾ ದೂರು ನೀಡಬಹುದು. ಆ್ಯಪ್ನಲ್ಲಿ ತಮ್ಮ ಸ್ವವಿವರ ನೀಡಿದರೂ, ಅಥವಾ ನೀಡದೆಯೂ ದೂರು ನೀಡಬಹುದು. ಆ್ಯಪ್ನಲ್ಲಿ ತಿಳಿಸಿದ 16 ರೀತಿಯ ದೂರುಗಳ ಪೈಕಿ ಒಂದನ್ನು ಸೆಲೆಕ್ಟ್ ಮಾಡಿ ಸೆಂಡ್ ಮಾಡಬಹುದು.
ಈ ಅಂಡ್ರಾಯ್ಡ್ ಆ್ಯಪ್ ಸಂಪೂರ್ಣವಾಗಿ ಹಿಂದಿ- ಇಂಗ್ಲೀಷ್ ನಲ್ಲಿದ್ದು, ಕನ್ನಡದಲ್ಲಿ ಇಲ್ಲದಿರೋದು, ಆ್ಯಪ್ ಬಳಕೆ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲದ ಕಾರಣ ರಾಜ್ಯದಲ್ಲಿ ಹೆಚ್ಚಿನವರು ಈ ಆ್ಯಪ್ ಬಳಸುತ್ತಿಲ್ಲ. ಬಳಸುತ್ತಿರುವುದು ಕೆಲವರೇ ಆದರೂ ನಕಲಿ ದೂರುಗಳು ಹೆಚ್ಚಿರುವುದು ವಿಪರ್ಯಾಸವೇ ಸರಿ.
ಇಂತವರಿಗೆ ಮತ ಕೊಡಿ ಎಂದು ಹಣ, ವಸ್ತು ನೀಡಿ ಆಮಿಷವೊಡ್ಡುವುದು, ಮತದಾರರನ್ನು ಮತಗಟ್ಟೆಗಳಿಗೆ ಕರೆದೊಯ್ಯುವುದು, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸುವುದು, ತಾವು ಹೇಳಿದವರಿಗೆ ಮತ ಕೊಡಬೇಕು ಎಂದು ಹೆಸರಿಸುವುದು, ಮತೀಯ ಭಾವನೆಗಳನ್ನು ಕೆರಳಿಸುವ ಭಾಷಣ, ಬಹಿರಂಗ ಹೇಳಿಕೆ ಕೊಡುವುದು. ಮಾಧ್ಯಮಗಳಲ್ಲಿ ಒಬ್ಬ ಅಭ್ಯರ್ಥಿಯ ಪರ ಸುದ್ದಿಯ ರೂಪದಲ್ಲಿ ಪ್ರಚಾರ ಮಾಡುವುದು, ಸುಳ್ಳು ಸುದ್ದಿಗಳನ್ನು ಹರಡುವುದು, ಕಟ್ಟಡ ಮುಂತಾದವುಗಳ ಮೇಲೆ ಪ್ರಚಾರ ಸಾಮಗ್ರಿಗಳನ್ನು ಅಂಟಿಸಿ ವಿರೂಪಗೊಳಿಸುವುದು ಇತ್ಯಾದಿ ಚುನಾವಣಾ ಅಕ್ರಮಗಳಾಗಿರುತ್ತದೆ.
ಆಯೋಗ ಏನು ಮಾಡುತ್ತದೆ? ನಾಗರಿಕರು ಅಪ್‌ಲೋಡ್ ಮಾಡಿದ ದೂರನ್ನು ಮತ್ತು ಅಪ್ಲಿಕೇಷನ್ ಸ್ವಯಂ ದಾಖಲಿಸಿಕೊಳ್ಳುವ ಸ್ಥಳದ ಮಾಹಿತಿಯನ್ನು ಆಧರಿಸಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಸ್ಥಳಕ್ಕೆ ಕೇವಲ 15 ನಿಮಿಷಗಳಲ್ಲಿ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಾರೆ. 30 ನಿಮಿಷಗಳಲ್ಲಿ ಪರಿಶೀಲನಾ ವರದಿಯನ್ನು ಚುನಾವಣಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳ ಗಮನ ಸೆಳೆಯುವರು.
ಕೇವಲ 100 ನಿಮಿಷಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು, ದೂರಿನ ಸ್ಥಿತಿಯ ಬಗ್ಗೆ ಅಧಿಕಾರಿಗಳು ದೂರುದಾರರಿಗೆ ಮಾಹಿತಿ ನೀಡುತ್ತಾರೆ, ಈಗಾಗಲೇ ದೇಶಾದ್ಯಂತ ಲಕ್ಷಕ್ಕೂ ಅಧಿಕ ನಾಗರಿಕರು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿದ್ದಾರೆ.