ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಕಸದ ಸಮಸ್ಯೆಗೆ ಕಡಿವಾಣ ಹಾಕಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಮತ್ತೊಂದು ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ರಸ್ತೆ ಬದಿಯಲ್ಲಿ ಕಸ ಎಸೆದು ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲು ಹೊಸ ರೀತಿಯ ಅಭಿಯಾನ ಆರಂಭವಾಗಿದೆ. ಬೀದಿ ಬದಿಯಲ್ಲಿ ಕಸ ಸುರಿಯುವವರ ವಿಡಿಯೋವನ್ನು ಹಂಚಿಕೊಂಡರೆ ಜನರಿಗೆ ₹250 ಬಹುಮಾನ ನೀಡಲಾಗುವುದು.
BSWML ನ ಅಧಿಕೃತ ವಾಟ್ಸಾಪ್ ಸಂಖ್ಯೆ 9448197197 ಗೆ ವಿಡಿಯೋ ಕಳುಹಿಸಿದವರು ಬಹುಮಾನಕ್ಕೆ ಅರ್ಹರಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ ಹೇಳಿದ್ದಾರೆ. ಮುಂದಿನ 30 ರಿಂದ 40 ವರ್ಷಗಳ ಅಗತ್ಯಗಳನ್ನು ಗಮನದಲ್ಲಿಟ್ಟು ನಗರದ ಮೂಲಸೌಕರ್ಯವನ್ನು ಪುನರ್‌ರಚಿಸಲು ಸರ್ಕಾರದಿಂದ ಸೂಚನೆಗಳಿವೆ. ಇದರ ಭಾಗವಾಗಿ ಈ ಯೋಜನೆ ಆರಂಭಿಸಲಾಗಿದೆ ಎಂದರು.
ವಿಡಿಯೋ ಹಂಚುವವರು ಸಾಧ್ಯವಾದರೆ ನಿಯಮ ಉಲ್ಲಂಘಿಸಿದವರ ವಿವರಗಳನ್ನೂ ನೀಡಬೇಕು ಎಂದು ವಿನಂತಿಸಲಾಗಿದೆ. ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದ್ದರೂ ರಸ್ತೆ ಬದಿಯಲ್ಲಿ ಕಸ ಎಸೆಯುವವರ ಸಂಖ್ಯೆ ಕಡಿಮೆಯಾಗಿಲ್ಲ. ಮನೆ ಬಾಗಿಲಿಗೇ ಆಟೋ ಟಿಪ್ಪರ್‌ಗಳು ಬಂದು ಕಸ ಸಂಗ್ರಹಿಸುತ್ತಿದ್ದರೂ ಕೆಲವು ನಾಗರಿಕರು ಕಸ ಎಸೆಯುವುದನ್ನು ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.
ಮಾಹಿತಿ ನೀಡಿದವರ ಗುರುತು ರಹಸ್ಯವಾಗಿರಲಿದೆ. ಬಹುಮಾನದ ಹಣವನ್ನು ಯುಪಿಐ ಮುಖಾಂತರ ನೇರವಾಗಿ ಪಾವತಿಸುವ ಯೋಜನೆ ರೂಪಿಸಲಾಗಿದೆ. ಇದರ ಆರ್ಥಿಕ ಹೊರೆ ಕುರಿತು ಸ್ಪಷ್ಟನೆ ನೀಡಿದ ಅಧಿಕಾರಿಗಳು, ಬಹುಮಾನಕ್ಕೆ ಬೇಕಾದ ಹಣವನ್ನು ಕಸ ಎಸೆದವರಿಂದ ಸಂಗ್ರಹಿಸಲಾದ ದಂಡದ ಮೊತ್ತದಿಂದಲೇ ನೀಡಲಾಗುತ್ತದೆ. ಇದು ನಗರವನ್ನು ಸ್ವಚ್ಛವಾಗಿಡಲು ಜನರಿಗೆ ಪ್ರೋತ್ಸಾಹ ಎಂದು ಹೇಳಿದ್ದಾರೆ. ಮಾಹಿತಿ ನೀಡಿದವರ ಮಾಹಿತಿಯನ್ನು ರಹಸ್ಯವಾಗಿಡಲಾಗುವುದು ಎಂದು GBA ಯ ಐಟಿ ತಂಡದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

