ಶಿಕ್ಷಕರನ್ನು ದೇವರ ಸಮಾನವೆಂದು ಗೌರವಿಸಲಾಗುತ್ತದೆ. ಆದರೆ ಕೆಲವರ ಕೃತ್ಯಗಳು ಇಡೀ ಶಿಕ್ಷಕರ ವೃಂದಕ್ಕೆ ಕಳಂಕ ತರುತ್ತಿವೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಶಾಲೆಯೊಂದರಲ್ಲಿ ನಡೆದ ಘಟನೆ ಇದಕ್ಕೆ ನಿದರ್ಶನವಾಗಿದೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕನ ಮೇಲೆ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿಬಂದಿದೆ.
ವೈದ್ಯಕೀಯ ಪರೀಕ್ಷೆಯ ವೇಳೆ ವಿದ್ಯಾರ್ಥಿನಿ ಗರ್ಭಿಣಿ ಎಂಬುದು ಬೆಳಕಿಗೆ ಬಂದ ನಂತರ ಪ್ರಕರಣ ಗಂಭೀರ ರೂಪ ಪಡೆದಿದೆ. ಆದರೆ ಶಿಕ್ಷಕ ತನ್ನ ತಪ್ಪನ್ನು ಮರೆಮಾಚಲು ಮತ್ತೊಬ್ಬ ಯುವಕನ ಮೇಲೆ ಆರೋಪ ಹಾಕಿದ್ದಾನೆ ಎನ್ನಲಾಗಿದೆ. ಹುಡುಗಿಯ ಜೊತೆ ಮಾತಾಡುತ್ತಿದ್ದಾನೆ ಎಂಬ ಕಾರಣಕ್ಕೆ ಯುವಕನ ಮೇಲೆ ಗರ್ಭಧಾರಣೆಯ ಆರೋಪ ಮಾಡಲಾಗಿತ್ತು.
ಈ ಸುಳ್ಳು ಆರೋಪದಿಂದ ನೊಂದು ಪಿರಿಯಾಪಟ್ಟಣ ತಾಲೂಕಿನ ಕುಡಕೂರು ಗ್ರಾಮದ ರಾಮು ಎಂಬ ಯುವಕ ವಾಯ್ಸ್ ನೋಟ್ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ, ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ಶಾಲೆಗೆ ಕಳಂಕ ಬಾರದಂತೆ ಕೇಸ್ ಮುಚ್ಚುತ್ತಿದ್ದಾರೆ ಎಂದು ವಾಯ್ಸ್ ನೋಟ್‌ನಲ್ಲಿ ಹೇಳಿದ್ದಾನೆ.
ಅ.31 ರಂದು ನಾಪತ್ತೆಯಾಗಿದ್ದ ರಾಮು ಶವ ಇದೀಗ ತುಂಗಾ ನಾಲೆಯೊಂದರಲ್ಲಿ ಪತ್ತೆಯಾಗಿದೆ. ಸ್ಥಳದಿಂದ ಬೈಕ್, ಚಪ್ಪಲಿ, ಮೊಬೈಲ್ ಮತ್ತು ಜರ್ಕಿನ್ ಪತ್ತೆಯಾಗಿದೆ. ಯುವಕನ ಕುಟುಂಬ ಹಾಗೂ ಸ್ಥಳೀಯರು ನಿಜವಾದ ತಪ್ಪಿತಸ್ಥನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಎನ್ಎ ಪರೀಕ್ಷೆಯ ಮೂಲಕ ನಿಜವಾದ ಅಪರಾಧಿಯನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

