Monday, November 17, 2025

Latest Posts

ಚಡಚಣ ಬ್ಯಾಂಕ್ ದರೋಡೆ ಪ್ರಕರಣ, ಪೊಲೀಸರ ಜಾಲಕ್ಕೆ ಸಿಕ್ಕಿ ಬಿದ್ದ ದರೋಡೆಕೋರರು!

- Advertisement -

ವಿಜಯಪುರ ಜಿಲ್ಲೆಯ ಭೀಮಾತೀರದ ಚಡಚಣ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಸೆಪ್ಟೆಂಬರ್ 16ರಂದು ನಡೆದಿದ್ದ ಬಹುಚರ್ಚಿತ ದರೋಡೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣ ಸಂಬಂಧ ಬಿಹಾರ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 9 ಕೆ.ಜಿ. ಚಿನ್ನ ಹಾಗೂ ₹86 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಬಿಹಾರದ 22 ವರ್ಷದ ರಾಕೇಶಕುಮಾರ್ ಸಹಾನಿ, 21 ವರ್ಷದ ರಾಜಕುಮಾರ್ ಪಾಸ್ವಾನ್ ಹಾಗೂ 21 ವರ್ಷದ ರಕ್ಷಕಕುಮಾರ್ ಮಾತೋ ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರೂ ದರೋಡೆಕೋರರಿಗೆ ಗನ್ ಪೂರೈಕೆ ಮಾಡಿರುವ ಆರೋಪಕ್ಕೆ ಒಳಪಟ್ಟಿದ್ದಾರೆ.

ಸೆಪ್ಟೆಂಬರ್ 16ರಂದು ಸಂಜೆ 6 ಗಂಟೆ ಸುಮಾರಿಗೆ ವಿಜಯಪುರ ಜಿಲ್ಲೆಯ ಚಡಚಣದ SBI ಶಾಖೆಗೆ ಮೂರು ಮಂದಿ ದರೋಡೆಕೋರರು ಗನ್‌ಗಳೊಂದಿಗೆ ಬ್ಯಾಂಕ್ ಒಳಗೆ ನುಗ್ಗಿದ್ದಾರೆ. ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ಮತ್ತು ಗ್ರಾಹಕರನ್ನ ಬೆದರಿಸಿ ಕಟ್ಟಿ ಹಾಕಿದ್ದರು. ಈ ವೇಳೆ 20 ಕೆ.ಜಿ. ಚಿನ್ನಾಭರಣ ಮತ್ತು ₹1.50 ಕೋಟಿ ನಗದು ದೋಚಿ ಪರಾರಿಯಾಗಿದ್ದರು.

ಘಟನೆಯ ನಂತರ ಮಹಾರಾಷ್ಟ್ರದ ಮಂಗಳವೇಡ ತಾಲೂಕಿನ ಹುಲಜಂತಿ ಗ್ರಾಮದ ಬಳಿ ಕಾರು ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿ ಗಲಾಟೆ ಉಂಟಾದ ಹಿನ್ನೆಲೆ, ಆರೋಪಿಗಳು ಕಾರು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದರು. ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ಒಟ್ಟು ದೋಚಲಾದ 20 ಕೆ.ಜಿ. ಚಿನ್ನದಲ್ಲಿ 9 ಕೆ.ಜಿ. ಚಿನ್ನ ಹಾಗೂ ₹1.50 ಕೋಟಿಯಲ್ಲಿ ₹86 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಇದಲ್ಲದೆ ಕಳೆದ ಮೇ 25ರಂದು ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ 58 ಕೆ.ಜಿ. ಚಿನ್ನಾಭರಣ, 5 ಲಕ್ಷ ರೂಪಾಯಿ ನಗದು ಕಳ್ಳತನ ನಡೆದಿತ್ತು. ಖತರ್ನಾಕ್‌ ಕಳ್ಳರು ಚಿನ್ನಾಭರಣಗಳನ್ನ ಕರಗಿಸಿ ಗಟ್ಟಿ ಮಾಡಿದ್ದರು. ಆ ಪೈಕಿ ಕೆಲವನ್ನು ಮಾರಿದ್ದರು. ಪ್ರಕರಣ ಬೆನ್ನಟ್ಟಿದ್ದ ಪೊಲೀಸರು ಕಳೆದ ತಿಂಗಳು 39 ಕೆ.ಜಿ ಬಂಗಾರದ ಗಟ್ಟಿ ಹಾಗೂ 1.16 ಕೋಟಿ ನಗದನ್ನ ವಶಕ್ಕೆ ಪಡೆದಿದ್ದರು. ಈಗ ಮತ್ತೆ 4.8 ಕೆ.ಜಿ. ಚಿನ್ನದ ಗಟ್ಟಿ ಹಾಗೂ 22 ಲಕ್ಷ ನಗದನ್ನ ಜಪ್ತಿ ಮಾಡಿದ್ದಾರೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss