Chanakya Neeti: ಚಾಣಕ್ಯರು ತಮ್ಮ ಚಾಣಕ್ಯನೀತಿಯಲ್ಲಿ ಹಲವು ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಮದುವೆಗೆ ವಧು ವರನನ್ನು ಹುಡುಕುವ ವಿಷಯದಿಂದ, ಹಣವನ್ನು ಹೇಗೆ ಬಳಸಬೇಕು, ಸ್ನೇಹ ಹೇಗೆ ಬೆಳಸಬೇಕು, ಸಂಬಂಧಿಕರ ಬಳಿ ಹೇಗೆ ವರ್ತಿಸಬೇಕು. ಹೀಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಚಾಣಕ್ಯರು ಸ್ನೇಹ ಮಾಡುವಾಗ ಎಂಥವರ ಸ್ನೇಹ ಮಾಡಬಾರದು ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.
ಸ್ವಾರ್ಥಿಗಳು: ಸ್ವಾರ್ಥ ಬುದ್ಧಿ ಇರುವವರ, ತಮ್ಮ ಬಗ್ಗೆಯಷ್ಟೇ ಯೋಚಿಸುವವರ ಬಳಿ ಎಂದಿಗೂ ಸ್ನೇಹ ಬೆಳೆಸಬಾರದು. ಸ್ನೇಹ ಬೆಳೆಸುವ ಮುನ್ನ ಎದುರಿನವರು ಸ್ವಾರ್ಥಿಗಳಾ, ನಿಸ್ವಾರ್ಥಿಗಳಾ, ಅಥವಾ ಇನ್ನೆಂಥವರು ಅಂತಾ ಗೊತ್ತಿರುವುದಿಲ್ಲ. ಆದರೆ ದಿನ ಹೋದಂತೆ ನಿಜವಾದ ಬಣ್ಣ ಗೊತ್ತಾದಾಗ, ಅವರ ಸ್ವಾರ್ಥಿ ಬುದ್ಧಿ ಅರಿವಾಗುತ್ತದೆ. ಈ ವೇಳೆ ನಿಧಾನವಾಗಿ ಅವರಿಂದ ಹಿಂದೆ ಸರಿಯುತ್ತ ಬನ್ನಿ. ಸ್ವಾರ್ಥಿಯ ಸ್ನೇಹ ಮಾಡಿದರೆ, ಮನಸ್ಸಿಗೆ ಬೇಸರವಾಗೋದು ಸತ್ಯ.
ನಡತೆ ಸರಿ ಇಲ್ಲದವರ ಸ್ನೇಹ: ಯಾವ ಸ್ನೇಹಿತರ ನಡೆ ಸರಿ ಇರುವುದಿಲ್ಲವೋ, ಅವರು ಮಾತನಾಡುವ ಮಾತು, ಅವರು ವಿರುದ್ಧ ಲಿಂಗದವರನ್ನು ಬಳಸಿಕೊಳ್ಳುವ ರೀತಿ, ಸರಿ ಇರುವುದಿಲ್ಲವೋ, ಅಂಥವರ ಸ್ನೇಹ ಎಂದಿಗೂ ಮಾಡಬೇಡಿ. ಅಸಭ್ಯ ವರ್ತನೆ ಇರುವ ವ್ಯಕ್ತಿಯೊಂದಿಗೆ ನೀವು ಇದ್ದರೆ, ಆ ಅಸಭ್ಯತನ ನಿಮಗೂ ಬರುತ್ತದೆ. ಒಂದು ವೇಳೆ ನೀವು ಸಭ್ಯರಾಗಿದ್ದರು, ಆ ಅಸಭ್ಯ ವ್ಯಕ್ತಿಯೊಂದಿಗೆ ನೀವು ಇರುವ ಕಾರಣಕ್ಕೆ, ನಿಮಗೂ ಜನ ಕೆಟ್ಟದಾಗಿಯೇ ನೋಡುತ್ತಾರೆ.
ಯಾವಾಗಲೂ ಕೆಟ್ಟದಾಗಿಯೇ ಯೋಚಿಸುವವರ ಸ್ನೇಹ: ಯಾವ ವ್ಯಕ್ತಿ ಯಾವಾಗಲೂ ಕೆಟ್ಟದಾಗಿ ಯೋಚಿಸುವನೋ, ಇನ್ನೊಬ್ಬರ ಬಗ್ಗೆ ಸದಾ ಕೆಟ್ಟದಾಗಿ ಮಾತನಾಡುವನೋ ಅಂಥ ವ್ಯಕ್ತಿಯೊಂದಿಗೆ ಎಂದಿಗೂ ಸ್ನೇಹ ಮಾಡಬೇಡಿ ಅಂತಾರೆ ಚಾಣಕ್ಯರು. ಇಂಥವರ ಸ್ನೇಹ ಮಾಡಬೇಕೆಂದೇ ಇಲ್ಲ. ನಿಮ್ಮ ಮನೆಯಲ್ಲೇ ಎಲ್ಲರ ಬಗ್ಗೆ ನಕಾರಾತ್ಮಕವಾಗಿ ಯೋಚಿಸುವ ಒಬ್ಬರು ಇದ್ದರೆ ಸಾಕು. ನೀವು ನಿಮ್ಮೆಲ್ಲ ಟ್ಯಾಲೆಂಟ್ ಮರೆತು, ಕುಗ್ಗಿ ಹೋಗುತ್ತೀರಿ. ಯಾವ ಕೆಲಸ ಮಾಡಬೇಕಾದ್ರೂ ನಿಮಗೆ ಹಿಂಜರಿಕೆಯಾಗುತ್ತದೆ. ಹಾಗಾಗಿ ಇಂಥವರಿಂದ ಆದಷ್ಟು ದೂರವಿರುವುದೇ ಉತ್ತಮ ಅಂತಾರೆ ಚಾಣಕ್ಯರು.
ಮಾತು ಮಾತಿಗೂ ಸಿಟ್ಟು ಮಾಡಿಕೊಳ್ಳುವವರ ಸ್ನೇಹ: ಮಾತು ಮಾತಿಗೂ ಯಾರು ಬೈಯ್ಯುತ್ತಾರೋ, ಅಂಥವರೊಂದಿಗೆ 1 ದಿನ ಇರುವುದೇ ಬಲು ಕಷ್ಟ. ಉಸಿರುಗಟ್ಟಿದ ಹಾಗಾಗುತ್ತದೆ. ಅಂಥದ್ರಲ್ಲಿ ಅಂಥವರ ಸ್ನೇಹ ಮಾಡೋದು ಒಂದೇ, ಪ್ರತಿದಿನ ಸಾಯುವುದೂ ಒಂದೇ. ಇನ್ನು ಎಲ್ಲ ವಿಷಯಕ್ಕೂ ಸಿಟ್ಟು ಮಾಡುವವರ ಬಳಿ ಹೆಚ್ಚಾಗಿ ಯಾರೂ ಸ್ನೇಹ ಮಡುವುದಿಲ್ಲ.
ಮೋಸ ಮಾಡುವಂಥರೊಂದಿಗಿನ ಸ್ನೇಹ: ಮೋಸ ಮಾಡುವ ಗುಣ ಇರುವವರ ಬಳಿ ಸ್ನೇಹ ಮಾಡಬಾರದು ಅಂತಾರೆ ಚಾಣಕ್ಯರು. ನಿಮ್ಮ ಎದುರು ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆ ಇನ್ನೊಬ್ಬರಿಗೆ ಮೋಸ, ದ್ರೋಹ ಮಾಡುತ್ತಿದ್ದಾಳೆಂದು ತಿಳಿದರೆ, ಆಕೆಯಿಂದ ನೀವು ದೂರವಿರುವುದೇ ಉತ್ತಮ. ಏಕೆಂದರೆ, ಅಂಥವರು ಮುಂದೆ ನಿಮಗೂ ಮೋಸ ಮಾಡಬಹುದು.