Chanakya Neeti: ಚಾಣಕ್ಯ ನೀತಿಯಲ್ಲಿ ಜೀವನದಲ್ಲಿ ಹೇಗಿರಬೇಕು..? ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು..? ಎಂಥ ಸಂಗಾತಿಯನ್ನು ಆರಿಸಿಕೊಳ್ಳಬೇಕು..? ಸಂಗಾತಿಯಲ್ಲಿರಬೇಕಾದ ಗುಣಗಳೇನು..? ಎಂಥ ಜನರ ಸಂಗ ಮಾಡಬೇಕು..? ಎಂಥ ಜನರ ಸಂಗ ಮಾಡಬಾರದು..? ಎಂತ ಜಾಗದಲ್ಲಿ ವಾಸಿಸಬೇಕು..? ಎಂಥ ಜಾಗದಲ್ಲಿ ವಾಸಿಸಬಾರದು..? ಹೀಗೆ ಹಲವು ವಿಷಯಗಳ ಬಗ್ಗೆ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ.
ಅದೇ ರೀತಿ ಚಾಣಕ್ಯರು ಪತ್ನಿಯಲ್ಲಿ ಯಾವ ಗುಣವಿದ್ದಾಗ, ಆಕೆಯ ಪತಿ ಶ್ರೀಮಂತನಾಗುತ್ತಾನೆ ಅಂತಲೂ ಹೇಳಿದ್ದಾರೆ. ಹಾಗಾದ್ರೆ ಪತ್ನಿ ಯಾವ ಕೆಲಸ ಮಾಡಿದರೆ, ಪತಿ ಅಭಿವೃದ್ಧಿ ಹೊಂದುತ್ತಾನೆ ಅಂತಾ ತಿಳಿಯೋಣ ಬನ್ನಿ.
ಪತಿ-ಪತ್ನಿ ಸಂಬಂಧವೆಂದರೆ, ಒಂದು ಶಕ್ತಿಯುತವಾದ ಸಂಬಂಧ. ಪವಿತ್ರ ಸಂಬಂಧ. ಒಂದು ಸಧೃಡ ಕುಟುಂಬವನ್ನು ಕಟ್ಟಬಹುದಾದ ಸಂಬಂಧ. ಒಂದು ಕುಟುಂಬದಲ್ಲಿ ಎಲ್ಲರ ನಡುವಿನ ಸಂಬಂಧ ಚೆನ್ನಾಗಿರಬೇಕು. ನಂಬಿಕೆಯಿಂದ ಕೂಡಿರಬೇಕು ಅಂದ್ರೆ, ಅದರಲ್ಲಿ ಆ ಮನೆಯೊಡತಿ ಅಥವಾ ಆ ಮನೆಯಲ್ಲಿರುವ ಗೃಹಿಣಿಯರ ಪಾತ್ರ ಮುಖ್ಯವಾಗಿರುತ್ತದೆ.
ಉದಾಹರಣೆಗೆ ಒಂದು ಮನೆಯಲ್ಲಿ ಅಪ್ಪ ಅಮ್ಮ, ಮಗ ಸೊಸೆ ಇದ್ದರೆ, ಅಲ್ಲಿ ಸೊಸೆ ಅಥವಾ ಅತ್ತೆಯಾದವಳು, ಮನೆಯಲ್ಲಿ ತಾಳ್ಮೆಯಿಂದ ವರ್ತಿಸಬೇಕು. ಆಗಲೇ ಮನೆಯಲ್ಲಿ ಎಲ್ಲರ ಸಂಬಂಧ ಗಟ್ಟಿಯಾಗಿರುತ್ತದೆ. ಸೊಸೆಯಾದವಳು ಈ ಮನೆ ನನ್ನದು ಎನ್ನುವ ರೀತಿ ಇರಬೇಕು. ಮತ್ತು ಅತ್ತೆಯಾದವಳು ಈಕೆ ಹೊರಗಿನಿಂದ ಬಂದವಳು ಅನ್ನುವ ರೀತಿ ಸೊಸೆಯನ್ನು ನಡೆಸಿಕೊಳ್ಳಬಾರದು. ಹೀಗಾದಾಗ ಮಾತ್ರ, ಆ ಮನೆ ಬೃಂದಾವನವಾಗಿರುತ್ತದೆ.
ಇನ್ನು ಪತ್ನಿಯಾದವಳು ಪತಿಯ ಶ್ರೇಯಸ್ಸಿಗಾಗಿ ಮಾಡಬೇಕಾದ ಮೊದಲ ಕೆಲಸ ಅಂದ್ರೆ, ಪತಿಯ ದುಡಿಮೆಯ ಹಣವನ್ನು ಅವಶ್ಯಕತೆಗೆ ತಕ್ಕಂತೆ ಖರ್ಚು ಮಾಡುವುದು. ಮಾರುಕಟ್ಟೆಗೆ, ಮಾಲ್‌ಗೆ ಹೋದರೆ, ಸಿಕ್ಕಿದ್ದೆಲ್ಲಾ ಬಾಚಿಕೊಂಡು ಬಂದರೆ, ಅದರಿಂದ ಏನೂ ಉಪಯೋಗವಾಗುವುದಿಲ್ಲ. ಅಲ್ಲದೇ, ಹಣವೂ ಸುಮ್ಮನೆ ವ್ಯರ್ಥವಾಗುತ್ತದೆ. ಹಾಗಾಗಿ ತರಕಾರಿ, ಹಣ್ಣು, ತಿಂಡಿ, ವಸ್ತು ಏನೇ ಇರಲಿ. ಅವಶ್ಯಕತೆ ಇದ್ದರಷ್ಟೇ ಖರೀದಿಸಬೇಕು.
ಎರಡನೆಯದಾಗಿ ಪತಿಯ ಕಷ್ಟ ಕಾಲಕ್ಕಾಗಿ ಪತ್ನಿಯಾದವಳು ಉಳಿತಾಯ ಮಾಡುವುದನ್ನು ಕಲಿಯಬೇಕು. ಹಿಂದಿನ ಕಾಲದಲ್ಲಾದರೆ, ಹೆಣ್ಣು ಮಕ್ಕಳು ಸಾಸಿವೆ ಡಬ್ಬದಲ್ಲಿ ಹಣ ಕೂಡಿಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ನೀವು ಹಲವು ಯೋಜನೆಗಳಲ್ಲಿ ನಿಮ್ಮ ಹಣವನ್ನು ಉಳಿತಾಯ ಮಾಡಬಹುದು. ಪತಿ ಮನೆ ಖರ್ಚಿಗೆ ನೀಡಿದ ಹಣದಲ್ಲಿ ಅವಶ್ಯಕತೆ ಇರುವಷ್ಟು ಹಣವನ್ನು ಖರ್ಚು ಮಾಡಿ, ಉಳಿದ ಹಣವನ್ನು ಇನ್ವೆಸ್ಟ್ ಮಾಡಬಹುದು. ಇದರಿಂದ ಉತ್ತಮ ಬಡ್ಡಿ ಸಿಕ್ಕು, ಕಷ್ಟಕಾಲಕ್ಕೆ ಅಥವಾ ಖರ್ಚಿಗೆ ಹಣ ಉಳಿಸಿದಂತಾಗುತ್ತದೆ.
ಮೂರನೇಯದಾಗಿ ಪತಿಯ ಕೆಲಸಕ್ಕೆ ನೀವು ಬೆಂಬಲ ನೀಡಬೇಕು. ಅವರು ಮಾಡುವ ಕೆಲಸ ಕೆಟ್ಟದ್ದಾಗಿರದೇ, ಉತ್ತಮವಾಗಿದ್ದು, ಅದರಿಂದ ನಿಮ್ಮ ಮನೆ ಖರ್ಚು ನಿಭಾಯಿಸಬಹುದು ಎಂಬಂತಿದ್ದರೆ, ಅಂಥ ಕೆಲಸಕ್ಕೆ ನೀವು ಬೆಂಬಲಿಸಬೇಕು. ಆ ಕೆಲಸ ಯಾವುದೇ ಆಗಿರಲಿ, ಕೂಲಿ ಕೆಲಸ, ಅಡುಗೆ ಕೆಲಸ ಹೀಗೆ ಯಾವುದೇ ಕೆಲಸವಾಗಲಿ, ನಿಯತ್ತಿನಿಂದ ಕೂಡಿದ್ದರೆ, ಅಂಥ ಕೆಲಸವೂ ಉತ್ತಮವೇ. ನಿಮ್ಮ ಪತಿ ಮಾಡುವ ಕೆಲಸ ಕೀಳು ಎಂದು ಎಂದಿಗೂ ಭಾವಿಸದೇ, ನೀವು ಅವರ ಕೆಲಸಕ್ಕೆ ಬೆಂಬಲಿಸಿದರೆ, ನಿಮ್ಮ ಪತಿ ಆ ಕೆಲಸದಲ್ಲಿ ಅಭಿವೃದ್ಧಿ ಹೊಂದುತ್ತಾರೆ.
ಇನ್ನು ನಾಲ್ಕನೇಯದಾಗಿ ಶ್ರೀಮಂತಿಕೆ, ಯಶಸ್ಸು ಅನ್ನೋದು ಥಟ್ಟನೆ ಬಂದು ಬಿಡುವುದಿಲ್ಲ. ಅದಕ್ಕೆ ಹಲವು ವರ್ಷಗಳ ಕಾಲ ಶ್ರಮ ಪಡಬೇಕಾಗುತ್ತದೆ. ಹಾಗಾಗಿ ಪತಿ ಒಂದು ಮಟ್ಟಕ್ಕೆ ಬಂದು ನಿಂತು. ತನ್ನ ಜೀವನದಲ್ಲಿ ಯಶಸ್ವಿಯಾಗುವವರೆಗೂ ಪತ್ನಿಯಾದವಳು ತಾಳ್ಮೆಯಿಂದ ಇರಬೇಕಾಗುತ್ತದೆ. ಆಕೆ ಎಷ್ಟು ತಾಳ್ಮೆಯಿಂದ, ಪ್ರೀತಿ, ಕಾಳಜಿಯಿಂದ ವರ್ತಿಸುತ್ತಾಳೋ, ಅಷ್ಟು ಪತಿಯಾದವನು ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಅಭಿವೃದ್ಧಿ ಹೊಂದಲು ಶ್ರಮಿಸುತ್ತಾನೆ.
ಕೊನೆಯದಾಗಿ ಪತ್ನಿಯಾದವಳು ಮನೆಯಲ್ಲಿ ಧನಾತ್ಮಕತೆಯಿಂದ ಇರಬೇಕು. ಯಾವ ಪತ್ನಿ ಪತಿಯನ್ನು ಕುರಿತು ಸದಾಕಾಲ ಹಂಗಿಸುತ್ತಾಳೋ, ಜಗಳ ಮಾಡುತ್ತಲೇ ಇರುತ್ತಾಳೋ, ಪತಿಯನ್ನು ಕೀಳಾಗಿ ನೋಡುತ್ತಾಳೋ, ಅಂಥ ಪತಿ ಪತ್ನಿಗಾಗಿ, ಕುಟುಂಬಕ್ಕಾಗಿ ಎಂದಿಗೂ ಶ್ರಮ ಪಡಲು ಇಚ್ಚಿಸುವುದಿಲ್ಲ. ನಾನು ಎಷ್ಟೇ ದುಡಿದರೂ, ಶ್ರಮಿಸಿದರು, ನನಗೆ ಕೀಳು ಮಟ್ಟದಲ್ಲೇ ಕಾಣುತ್ತಾರೆಂದ ಮೇಲೆ ನಾನೇಕೆ ಇವರ ಸಲುವಾಗಿ ಅಷ್ಟು ಶ್ರಮ ವಹಿಸಬೇಕು. ಇವರ ಯೋಗ್ಯತೆ ಇಷ್ಟೇ ಎಂದ ಮೇಲೆ, ಎಷ್ಟು ಬೇಕೋ, ಅಷ್ಟೇ ದುಡಿದರಾಯ್ತು ಎಂದು ಪತಿಯೂ ನಿರ್ಲಕ್ಷ್ಯ ವಹಿಸುತ್ತಾನೆ. ಹಾಗಾಗಿ ಪತ್ನಿಯಾದವಳು ಮನೆ ಜನರ ಮನಸ್ಸು ನೋಯಿಸದಂತೆ ಮಾತನಾಡಬೇಕು. ಇಂಥ ಗುಣಗಳನ್ನು ಪತ್ನಿಯಾದವಳು ಅಳವಡಿಸಿಕೊಂಡರೆ, ಪತಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾನೆ.