ಮುಂಬೈ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರಯಾಣಿಕರು ಆಗಮಿಸಿದ್ದರಿಂದ ಅಲ್ಲಿ ಕೆಲ ಕಾಲ ನೂಕುನುಗ್ಗಲು ಉಂಟಾಗಿ, ಹಲವಾರು ಪ್ರಯಾಣಿಕರು ತಮ್ಮ ಫ್ಲೈಟ್ ಮಿಸ್ ಮಾಡಿಕೊಂಡಿದ್ದಾರೆ.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಂದು ಹಿಂದೆಂದೂ ಕಾಣದ ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ರು. ದೇಶದ ನಾನಾ ಭಾಗಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಏರ್ಪೋರ್ಟ್ ನಲ್ಲಿ ನಿಲ್ಲೋದಕ್ಕೂ ಸ್ಥಳ ಇರಲಿಲ್ಲ. ರೈಲ್ವೇ ಸ್ಟೇಷನ್ ಮಾದರಿಯಲ್ಲಿ ಜನ ಸಂದಣಿ ಇದ್ದು, ಸಾಕಷ್ಟು ಮಂದಿ ಪ್ರಯಾಣಿಕರು ತಮ್ಮ ಫ್ಲೈಟ್ ಮಿಸ್ ಮಾಡಿಕೊಂಡ್ರು. ಇದರಿಂದಾಗಿ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಹಾಗೂ ನೂಕುನುಗ್ಗಲು ಏರ್ಪಟ್ಟಿತ್ತು.
ಇನ್ನು ಮುಂಬೈ ನಿಂದ ಗೋವಾ, ಹೈದ್ರಾಬಾದ್ ನಾಗ್ಪುರಕ್ಕೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನಗಳು , ಸ್ಪೈಸ್ ಜೆಟ್ ಹಾಗೂ ಇಂಡಿಗೋ ಫ್ಲೈಟ್ ಗಳು ಮಾತ್ರ ನಿಗದಿತ ಸಮಯಕ್ಕೆ ಬಂದಿದ್ದು, ಇನ್ನುಳಿದಂತೆ ಬೆಳಗ್ಗೆ 6 ಗಂಟೆಯ ನಂತರ ನಿಗದಿಯಾಗಿದ್ದ ಇತರೆಲ್ಲಾ ಫ್ಲೈಟ್ ಗಳು 15 ರಿಂದ 30 ನಿಮಿಷಗಳ ಕಾಲ ತಡವಾಗಿ ಆಗಮಿಸಿವೆ. ಹೀಗಾಗಿ ಪ್ರಯಾಣಿಕರಲ್ಲೇ ಗೊಂದಲ ಮೂಡಿತ್ತು. ಇನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯಾಣಿಕರ ಅನುಕೂಲಕ್ಕಾಗಿ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಅಂತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಲು ಸಾಲು ಹಬ್ಬಗಳು ಮತ್ತು ವೀಕೆಂಡ್ ಹಿನ್ನೆಲೆಯಲ್ಲಿ ಹೆಚ್ಚು ಮಂದಿ ಪ್ರಯಾಣಿಕರು ಆಗಮಿಸಿದ್ದರು.

