ಕೊಪ್ಪಳ: ಮುಂಗಾರು ವೈಫಲ್ಯದಿಂದ ರೈತರು ಕಂಗಾಲಾಗಿದ್ದು, ಬೆಳೆದ ಬೆಳೆಗಳಿಗೆ ನೀರುಣಿಸಲು ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಕೊಪ್ಪಳ ಹಾಗೂ ಅಕ್ಕಪಕ್ಕದ ಜಿಲ್ಲೆಯ ಹಲವು ರೈತರು ಬೆಳೆದ ಬೆಳೆಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸುತ್ತಿದ್ದಾರೆ. ಆದರೆ ರೈತ ದೇವಪ್ಪ ಕೊರ್ಲಗುಂದಿ ಅವರು ತಮ್ಮ ಮೆಣಸಿನಕಾಯಿ ಬೆಳೆ ಉಳಿಸಿಕೊಳ್ಳಲು ದ್ವಿಚಕ್ರ ವಾಹನದ ಮೂಲಕ ಬೆಳೆಗೆ ನೀರು ಹಾಯಿಸುತ್ತಿದ್ದಾರೆ.
ಟ್ಯಾಂಕರ್ ಬಾಡಿಗೆ ದುಬಾರಿಯಾಗಿರುವುದರಿಂದ ಕೊಪ್ಪಳ ಜಿಲ್ಲೆಯ ಅನೇಕ ರೈತರು ದೇವಪ್ಪ ಅವರಂತೆ ಬೈಕ್ ನಲ್ಲಿ ಕೊಡಗಳ ಮೂಲಕ ನೀರು ತರಲು ಬಯಸುತ್ತಿದ್ದಾರೆ. ಜಿಲ್ಲೆಯ ರೈತರು ಮೆಣಸಿನಕಾಯಿ ಸೇರಿದಂತೆ ನಾನಾ ಬೆಳೆಗಳನ್ನು ಬೆಳೆದು ಅಪಾರ ಹಣ ಖರ್ಚು ಮಾಡಿದ್ದಾರೆ. ಆದರೆ ಈ ಬಾರಿ ಜುಲೈ-ಸೆಪ್ಟೆಂಬರ್ ನಡುವೆ ಮಳೆ ಕೊರತೆಯಿಂದ ಬೆಳೆ ನಷ್ಟವಾಗುತ್ತಿದೆ.
ಬಿತ್ತನೆ ನಂತರ ಈರುಳ್ಳಿ, ಮೆಣಸಿನಕಾಯಿ ಉತ್ತಮ ಫಸಲು ಬರುವ ನಿರೀಕ್ಷೆಯಲ್ಲಿದ್ದ ಗದಗ ಮತ್ತು ಕೊಪ್ಪಳದ ಕೆಲ ರೈತರು ಇದೀಗ ಮುಂಗಾರು ವೈಫಲ್ಯದಿಂದ ಕಂಗಾಲಾಗಿದ್ದಾರೆ.
ಅನೇಕ ರೈತರು ಕೊಳವೆಬಾವಿ, ಬಾವಿಗಳನ್ನು ಹೊಂದಿದ್ದರೂ, ಅವರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಕೈಕೊಡುತ್ತಿದ್ದು, ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ.
ದೇವಪ್ಪ ಕೂಡ ಈ ಸಮಸ್ಯೆಯನ್ನು ಎದುರಿಸಿದ್ದು, ಕೊನಗೆ ದ್ವಿಚಕ್ರವಾಹನದಲ್ಲಿ ಪ್ಲಾಸ್ಟಿಕ್ ಕೊಡಗಳಲ್ಲಿ ನೀರು ತಂದು ತನ್ನ ಮೆಣಸಿನಕಾಯಿ ಬೆಳೆಗೆ ನೀರುಣಿಸುವ ನಿರ್ಧಾರಕ್ಕೆ ಬಂದರು. ತಮ್ಮ ಜಮೀನಿನಿಂದ ಒಂದು ಕಿ.ಮೀ ದೂರದಲ್ಲಿರುವ ಕೆರೆಯಿಂದ ದಿನಕ್ಕೆರಡು ಬಾರಿ ಮೋಟಾರ್ ಸೈಕಲ್ ನಲ್ಲಿ ನೀರು ಸಾಗಿಸುತ್ತಿದ್ದಾರೆ. ಅವರ ಕುಟುಂಬದ ಸದಸ್ಯರು ಕೊಡಗಳಲ್ಲಿ ನೀರು ತುಂಬಲು ಸಹಾಯ ಮಾಡುತ್ತಿದ್ದಾರೆ.
ಈಗ ಮಳೆ ಇಲ್ಲ. ಆದರೆ ನನ್ನ ಮೆಣಸಿನಕಾಯಿ ಬೆಳೆ ಚೆನ್ನಾಗಿ ಬೆಳೆಯುತ್ತಿದ್ದು, ಈ ಹಿಂದೆ ನಷ್ಟ ಅನುಭವಿಸಿದ್ದರಿಂದ ಈ ಬಾರಿ ಏನಾದರೂ ಮಾಡಿ ಬೆಳೆ ಉಳಿಸಿಕೊಳ್ಳಬೇಕಾಗಿದೆ. ಹೀಗಾಗಿ ಮೋಟಾರ್ ಸೈಕಲ್‌ನಲ್ಲಿ ನೀರು ತಂದು ಹಾಕುತ್ತಿದ್ದೇನೆ. ಪೆಟ್ರೋಲ್ ಬೆಲೆಯೂ ಹೆಚ್ಚಾಗಿದೆ. ಆದರೆ ನನ್ನ ಮೆಣಸಿನಕಾಯಿ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ ಎಂಬ ಭರವಸೆ ಇದೆ ಎಂದು ದೇವಪ್ಪ ಹೇಳಿದ್ದಾರೆ.
Rajat Ullagaddi : ರಜತ್ ಉಳ್ಳಾಗಡ್ಡಿ ಮನೆಯನ್ನು ಪರಿಶೀಲಿಸಿದ ಅರಣ್ಯ ಅಧಿಕಾರಿಗಳು