ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 240 ಸಿಸಿಟಿವಿ ಕ್ಯಾಮೆರಾಗಳು ಆಫ್!

ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜೆರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ಪಂದ್ಯದ​ ವೇಳೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರೀ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಪಂದ್ಯ ನಡೆದ ದಿನವೇ ಸುಮಾರು 240 ಸಿಸಿಟಿವಿ ಕ್ಯಾಮೆರಾಗಳು ಏಕಾಏಕಿ ನಿಷ್ಕ್ರಿಯಗೊಂಡಿದ್ದವು.

ಪ್ರಾಥಮಿಕ ತನಿಖೆಯ ಪ್ರಕಾರ, IVS Digital Solutions ಸಂಸ್ಥೆಯ ಇಬ್ಬರು ಸಿಬ್ಬಂದಿ ಮಂಜುನಾಥ್ ಮತ್ತು ಅಬ್ದುಲ್ ಕಲಾಂ ಅನಧಿಕೃತವಾಗಿ ಸ್ಟೇಡಿಯಂ ಪ್ರವೇಶಿಸಿ, ಸಿಸಿಟಿವಿ ಸರ್ವರ್ ರೂಮ್‌ಗೆ ಹೋಗಿ NVR ಹಾಗೂ ಫೈಬರ್ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಪ್ರವೇಶ ದ್ವಾರಗಳು, ಸ್ಟ್ಯಾಂಡ್‌ಗಳು ಹಾಗೂ ಕನ್ಕೋರ್ಸ್ ಪ್ರದೇಶಗಳಲ್ಲಿ ಭದ್ರತಾ ಮೇಲ್ವಿಚಾರಣೆಗೆ ತೊಂದರೆ ಉಂಟಾದರೂ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಯಾವುದೇ ಅನಾಹುತವಾಗದಂತೆ ನೋಡಿಕೊಂಡಿದ್ದಾರೆ.

ಈ ಸಂಬಂಧ ಕೆಎಸ್‌ಸಿಎ ವತಿಯಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಸಂಸ್ಥೆಯ ಆಂತರಿಕ ವೈಮನಸ್ಯವೇ ಈ ಕೃತ್ಯಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಒಟ್ಟಾರೆ, ಮಹತ್ವದ ಪಂದ್ಯ ವೇಳೆ ಇಂತಹ ಭದ್ರತಾ ಲೋಪ ಗಂಭೀರವಾಗಿದ್ದು, ಭದ್ರತಾ ವ್ಯವಸ್ಥೆ ಬಲಪಡಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.

About The Author