ರಾಜ್ಯದಲ್ಲಿ ಜಾತಿ ಜಟಾಪಟಿ ಶುರುವಾಗಿದ್ದು, ರಾಜ್ಯಪಾಲರ ಅಂಗಳ ತಲುಪಿದೆ. ಮತಾಂತರಗೊಂಡವರ ಜಾತಿ ಉಲ್ಲೇಖ ವಿಚಾರವಾಗಿ, ವಿರೋಧ ಪಕ್ಷಗಳ ಕೆಂಗಣ್ಣಿಗೆ ರಾಜ್ಯ ಸರ್ಕಾರ ಗುರಿಯಾಗಿದೆ. ಮತ್ತೊಂದೆಡೆ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವೂ ಮುನ್ನೆಲೆಗೆ ಬಂದಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ರಾಜ್ಯದಲ್ಲಿ 1500ಕ್ಕೂ ಹೆಚ್ಚು ಜಾತಿ, ಉಪ ಜಾತಿಗಳು ಇರುವುದು ಬಹಿರಂಗವಾಗಿದೆ. ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 1,561 ಜಾತಿ-ಉಪಜಾತಿಗಳಿವೆ.
ಕ್ರಿಶ್ಚಿಯನ್ ಜತೆ ಹಿಂದೂ ಉಪಜಾತಿಗಳ ಹೆಸರುಗಳನ್ನು ಉಲ್ಲೇಖಿಸಿರುವುದಕ್ಕೆ, ಬಿಜೆಪಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ದಲಿತ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್ ಸೇರಿ, ಇತರೆ ಉಪಜಾತಿಗಳ ಸೇರ್ಪಡೆಗೆ ವಿರೋಧ ಎದ್ದಿದೆ.
ಇದೇ ವಿಚಾರವಾಗಿ ಸೆಪ್ಟಂಬರ್ 16ರಂದು ಬಿಜೆಪಿ ನಾಯಕರು, ಸ್ವಾಮೀಜಿಗಳು ಮತ್ತು ಸಾಮಾಜಿಕ ವಲಯದ ಪ್ರಮುಖರು ಒಟ್ಟಾಗಿ ಸಭೆ ನಡೆಸಿದ್ದಾರೆ. ಸರ್ಕಾರದ ನಿರ್ಧಾರಗಳ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟದ ಬಗ್ಗೆಯೂ ತೀರ್ಮಾನಿಸಿದ್ದಾರೆ. ಸಭೆ ಬಳಿಕ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಬಿಜೆಪಿ ಸಂಸದ ಯದುವೀರ್ ಒಡೆಯರ್, ಸಂಸದ ಪಿ.ಸಿ. ಮೋಹನ್, ಶಾಸಕ ಸುನಿಲ್ ಕುಮಾರ್, ಎಂಎಲ್‌ಸಿ ಎನ್. ರವಿ ಕುಮಾರ್ ಸೇರಿ ಹಲವರು ನಿಯೋಗದಲ್ಲಿದ್ರು.
ಈ ಜಾತಿ, ಉಪಜಾತಿಗಳ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡಿದ್ದು,
ಅವರೂ ನಾಗರಿಕರು. ಮತಾಂತರ ಆಗಿರುವ ಕಾರಣಕ್ಕೆ ಸಿಗಬೇಕಾದ ಸೌಲಭ್ಯದಿಂದ, ಅವರನ್ನು ವಂಚಿತರನ್ನಾಗಿ ಮಾಡಲಾಗದು ಅಂತಾ ಹೇಳಿದ್ರು. ಮತ್ತೊಂದೆಡೆ, ಹಿಂದೂ ಜಾತಿಗಳ ನಡುವೆ, ಕ್ರೈಸ್ತರನ್ನು ನುಗ್ಗಿಸುವ ಹುನ್ನಾರ ಆರೋಪಿಸಿ, ಸಾಮಾಜಿಕ ನ್ಯಾಯ ಜಾಗೃತಿ ವೇದಿಯಿಂದಲೂ ಹೋರಾಟಕ್ಕೆ ಸಿದ್ದತೆ ನಡೀತಿದೆ. ರಾಜ್ಯಾದ್ಯಂತ ಹೋರಾಟ ಮಾಡಲು ನಿರ್ಧರಿಸಿದ್ದಾರೆ.