ಬೆಂಗಳೂರು: ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರ ಪೈಕಿ ಮೂವರನ್ನು ಸೆಳೆಯಲು ದೋಸ್ತಿ ಭಾರೀ ಸ್ಕೆಚ್ ತಯಾರಿಸಿದೆ. ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಬೆಂಗಳೂರಿನ ಮೂವರು ಶಾಸಕರಿಗೆ ರಾಮಲಿಂಗಾ ರೆಡ್ಡಿ ಮೂಲಕ ಗಾಳ ಹಾಕಲು ಸಿಎಂ ಸ್ಕೆಚ್ ಹಾಕಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರೂ ಆಗಿರುವ ಬಿಟಿಎಂ ಲೇಔಟ್ ಶಾಸಕರ ರಾಮಲಿಂಗಾ ರೆಡ್ಡಿ ಜೊತೆ ಬೆಂಗಳೂರಿನ ಶಾಸಕರಾದ ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಮುನಿರತ್ನ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಲೂ ಮುನ್ನ ಈ ನಾಲ್ವರು ಶಾಸಕರು ಒಮ್ಮತದ ನಿರ್ಧಾರ ತೆಗೆದುಕೊಂಡು ದೋಸ್ತಿ ವಿರುದ್ಧ ಸಮರ ಸಾರಿದ್ದರು. ಆದರೆ ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಶಾಸಕ ರಾಮಲಿಂಗಾ ರೆಡ್ಡಿ ತಮ್ಮ ರಾಜೀನಾಮೆ ವಾಪಸ್ ಪಡೆದು ಸದನಕ್ಕೆ ಹಾಜರಾದ್ರು.
ಇನ್ನು ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆಯುತ್ತಿದ್ದಂತೆ ವಿಚಲಿತರಾಗದಂತೆ ತೋರ್ಪಡಿಸಿರೋ ಶಾಸಕ ಸೋಮಶೇಖರ್, ಮುನಿರತ್ನ ಹಾಗೂ ಬೈರತಿ ಬಸವರಾಜು ವಿಶ್ವಾಮತ ಯಾಚನೆ ಮಂಡನೆಗೂ ಮುನ್ನ ವಿಡಿಯೋವೊಂದನ್ನು ಬಿಡುಗಡೆ ಮಾಡಿ, ನಾವು ಯಾವುದೇ ಕಾರಣಕ್ಕೂ ರಾಮಲಿಂಗಾ ರೆಡ್ಡಿಯವರನ್ನು ಅನುಸರಿಸಲ್ಲ. ಅಲ್ಲದೆ ನಾವು ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದು ಯಾವುದೇ ಕಾರಣಕ್ಕೂ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದರು. ಇನ್ನು ಈ ಕುರಿತು ಮಾತನಾಡುತ್ತಿದ್ದ ಶಾಸಕರ ಮುಖದಲ್ಲಿ ಕೊಂಚ ವಿಚರಲಿತರಾದಂತೆ ಕಂಡುಬಂದಿತ್ತು. ಇದನ್ನೇ ಅಸ್ತ್ರವಾಗಿಟ್ಟುಕೊಂಡು ಇದೀಗ ಸಿಎಂ ಆ ಮೂವರು ಶಾಸಕರನ್ನು ರಾಮಲಿಂಗಾ ರೆಡ್ಡಿ ಮೂಲಕ ಮನವೊಲಿಕೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಇಂದು ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ ದೇವೇಗೌಡರೊಂದಿಗೆ ರಾಮಲಿಂಗಾರೆಡ್ಡಿ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದ್ದಾರೆ.
ಇನ್ನು ದೋಸ್ತಿ ಲೆಕ್ಕಾಚಾರದಂತೆ ಎಲ್ಲವೂ ನಡೆದರೆ ಸೋಮವಾರದ ವಿಶ್ವಾಸಮತ ಯಾಚನೆಯಲ್ಲಿ ದೋಸ್ತಿ ಪರ 3 ಮತಗಳು ಚಲಾವಣೆಯಾಗಲಿವೆ. ಇನ್ನುಳಿದ ಶಾಸಕರನ್ನು ಸಂಪರ್ಕಿಸಲು ಕಾಂಗ್ರೆಸ್-ಜೆಡಿಎಸ್ ನಾಯಕರ ಶತಪ್ರಯತ್ನ ಮುಂದುವರಿದಿದೆ.