ಬರ್ಮಿಂಗ್ ಹ್ಯಾಮ್: ಆಂಗ್ಲರ ನಾಡು ಬರ್ಮಿಂಗ್ ಹ್ಯಾಮನ್ನಲ್ಲಿ 22ನೇ ಆವೃತ್ತಿಯ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ ನೀಡಲಾಗಿದೆ.
ಗುರುವಾರ ರಾತ್ರಿ ಇಲ್ಲಿನ ಆಲೆಕ್ಸಾಂಡರ್ ಮೈದಾನದಲ್ಲಿ ಸಿಡಿ ಮದ್ದುಗಳ ಚಿತ್ತಾರದಿಂದ ಸಮಾರಂಭಕ್ಕೆ ಮೆರಗು ನೀಡಿತು. ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.
ಕಲಾವಿದರು ಬಣ್ಣಬಣ್ಣದ ವೇಷ ಧರಿಸಿ ಹೆಜ್ಜೆ ಹಾಕಿದರು. ಆಂಗ್ಲರ ಶ್ರೇಷ್ಠ ವ್ಯಕ್ತಿಗಳಾದ ಚಾರ್ಲಿ ಚಾಪ್ಲಿನ್, ವಿಲಿಯಮ್ ಶೇಕ್ಸ್ ಪಿಯರ್, ಮತ್ತು ಇತರರ ಟ್ಯಾಬ್ಲೂಗಳು ಗಮನ ಸೆಳೆದವು. ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ನೋಡುಗರ ಸಂತಸವನ್ನು ಹೆಚ್ಚಿಸಿತು.
ಉದ್ಘಾಟನಾ ಸಮಾರಂಭದಲ್ಲಿ ಇಂಗ್ಲೆಂಡ್ ನ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದರು.
ಎಲ್ಲಾ 72 ರಾಷ್ಟ್ರಗಳು ಸಮಾರಂಭದ ಪಥ ಸಂಚಲನದಲ್ಲಿ ಪಾಲ್ಗೊಂಡವು.
ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳು ಆಕರ್ಷಕ ಪಥ ಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು.