ಬೆಂಗಳೂರು: ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ನಿಗದಿಯಾಗಿದ್ದ ಮುಹೂರ್ತ ಒಂದಿಲ್ಲೊಂದು ಕಾರಣಕ್ಕೆ ಮುಂದೂಡಿಕೆಯಾಗ್ತಾನೆ ಇದೆ. ದೋಸ್ತಿಗಳೇ ನಾನಾ ಕಾರಣ ನೀಡಿ ಕಾನೂನಾತ್ಮಕವಾಗಿ ವಿಶ್ವಾಸಮತ ಯಾಚನೆಗೆ ಅಡ್ಡಿಪಡಿಸ್ತಿರೋದು ಎಲ್ಲರಿಗೂ ತಿಳಿದಿರೋ ವಿಚಾರವೇ. ಆದ್ರೀಗ ಪಕ್ಷೇತರ ಶಾಸಕರ ಅರ್ಜಿ ವಿಚಾರಣೆ ನಡೆಸೋದಿಲ್ಲ ಅಂತ ತಿಳಿಸಿದ್ದು ಇಂದೂ ಕೂಡ ವಿಶ್ವಾಸಮತ ಯಾಚನೆ ನಡೆಯೋದು ಸಂಶಯವೇ.
ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆಂದು ಚಾತಕ ಪಕ್ಷಿಯಂತ ಕಾಯುತ್ತಾ ಕುಳಿತಿರೋ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯಲು ತುದಿಗಾಲಲ್ಲಿ ಕಾಯುತ್ತಾ ಕುಳಿತಿದೆ. ಆದ್ರೆ ಇದಕ್ಕೆ ಅವಕಾಶ ನೀಡದ ದೋಸ್ತಿಗಳು ಮೂರು ಬಾರಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡು ಸರ್ಕಾರವನ್ನು ಈವರೆಗೂ ಉಳಿಸಿಕೊಂಡು ಬಂದಿದ್ದಾರೆ. ಆದ್ರೆ ಇಂದು ವಿಶ್ವಾಸಮತ ನಡೆಸ್ತೇವೆ ಅಂತ ಒಪ್ಪಿಕೊಂಡಿದ್ದ ಸಿಎಂ ನಿರ್ಧಾರಕ್ಕೆ ಮತ್ತೊಂದು ಅಡ್ಡಿ ಎದುರಾಗಿದೆ.
ಹೌದು, ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ನಾಗೇಶ್ ರಾಜೀನಾಮೆ ಅರ್ಜಿ ವಿಚಾರಣೆ ನಡೆಸಬೇಕಿದ್ದ ಸುಪ್ರೀಂಕೋರ್ಟ್ ಇವತ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲ. ತರಾತುರಿಯಲ್ಲಿ ವಿಚಾರಣೆ ನಡೆಸಲಾಗುವುದಿಲ್ಲ, ನಾಳೆ ನಡೆಸುತ್ತೇವೆ ಅಂತ ಹೇಳಿದೆ. ಹೀಗಾಗಿ ದೋಸ್ತಿ ಸರ್ಕಾರಕ್ಕೆ ಇವತ್ತೇ ಕೊನೇ ದಿನ ಅಂತ ಹೇಳಿಕೊಂಡು ತಿರುಗಾಡುತ್ತಿದ್ದ ಬಿಜೆಪಿಗೆ ಮತ್ತೆ ನಿರಾಶೆ. ಅಲ್ಲದೆ ಮೈತ್ರಿ ಸರ್ಕಾರಕ್ಕೆ ಜೀವದಾನ ಸಿಕ್ಕಂತಾಗಿದೆ.