Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕ ಪಿ.ರಾಜೀವ್, ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರದ ನಡೆ ವಿರುದ್ಧ ಈಗಾಗಲೇ ಜನಾಕ್ರೋಶ ಯಾತ್ರೆ ಸಂಚರಿಸುತ್ತಿದೆ. ಈ ಜನಾಕ್ರೋಶ ಯಾತ್ರೆ ಇದೇ 16 ರಂದು ಹುಬ್ಬಳ್ಳಿ -ಧಾರವಾಡ ಜಿಲ್ಲೆಗೆ ಆಗಮಿಸಲಿದೆ. ರಾಜ್ಯ ಸರ್ಕಾರ ಎರಡೇ ವರ್ಷದಲ್ಲಿ ರೈತರ, ದಲಿತರ, ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದೆ. ಪಂಚವಾರ್ಷಿಕ ಯೋಜನೆಗಳು ಜಾರಿಗೆ ಬಂದರೂ ಕೂಡ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳಿಗೆ ಯಾವುದೇ ಯೋಜನೆ ರೂಪಿಸಲಿಲ್ಲ. ಈ ಹಿಂದಿನಿಂದಲೂ ಕಾಂಗ್ರೆಸ್ ನಿಂದ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ. ರಾಜ್ಯ ಸರ್ಕಾರ ದಲಿತರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಎಸ್ ಇಪಿಟಿಎಸ್ ಪಿ ಅನುದಾನವನ್ನ ಸ್ಥಳಾಂತರ ಮಾಡುವ ಮೂಲಕದಲಿತರಿಗೆ ಅನ್ಯಾಯ ಮಾಡಿದೆ. ಇದೇ ರೀತಿ ನಿರ್ಲಕ್ಷ್ಯ ಮುಂದುವರೆದರೆ ದಲಿತರ ಉದ್ದಾರ ಆಗುವುದಾದ್ರೂ ಹೇಗೆ..? ಎಂದು ಪ್ರಶ್ನಿಸಿದ್ದಾರೆ.
ರೈತ ವಿದ್ಯಾನಿಧಿ, ಕೃಷಿ ಸಮ್ಮಾನ್ ಯೋಜನೆಯ ಅನುದಾನ ಸ್ಥಗಿತ ಮಾಡಿದ್ದಾರೆ ಈ ರೀತಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಯೊಂದು ಬೆಲೆ ಏರಿಕೆ ಮಾಡುವ ಮೂಲಕ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಜನನ ಪ್ರಮಾಣ ಪತ್ರದಿಂದ ಮರಣಪ್ರಮಾಣ ಪತ್ರದ ವರೆಗೂ ಪ್ರತಿಯೊಂದು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ವಿದ್ಯುತ್, ನೀರು, ಹಾಲು ಸೇರಿದಂತೆ ಅನೇಕ ಬೆಲೆ ಏರಿಕೆಯಾಗಿವೆ. ಈ ಹಿನ್ನೆಲೆ ಇದೇ 16 ರಂದು ಜನಾಕ್ರೋಶ ಯಾತ್ರೆ ಹುಬ್ಬಳ್ಳಿಗೆ ಪ್ರವೇಶ ಮಾಡಲಿದೆ. ಕನಿಷ್ಠ 25 ಸಾವಿರ ಜನ ಈ ಜನಾಕ್ರೋಶ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಜೀವ್ ಹೇಳಿದ್ದಾರೆ.
ಜಾತಿಗಣತಿ ವರದಿ ಮಂಡನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಜೀವ್, ಸಿದ್ದರಾಮಯ್ಯನವರು ಎರಡನೇ ಅವಧಿಯಲ್ಲಿ ಇದನ್ನು ಬಿಡುತ್ತಿದ್ದಾರೆ. ಜಾತಿಗಣತಿ ವೈಜ್ಞಾನಿಕವಾಗಿ ಬರಬೇಕು ಅನ್ನೋದು ನಮ್ಮ ಬೇಡಿಕೆ. ಸಿದ್ದರಾಮಯ್ಯ ತಮ್ಮ ಕುರ್ಚಿಗೆ ಆತಂಕ ಬಂದಾಗ ಮಾತ್ರ ಜಾತಿ ಗಣತಿ ವಿಚಾರ ಪ್ರಸ್ತಾಪಿಸುತ್ತಾರೆ. ರಾಜಕೀಯ ಕಾರಣಕ್ಕಾಗಿ ಈ ರೀತಿ ಬಳಸಿಕೊಳ್ಳುವದು ತಪ್ಪು. ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಇಷ್ಟು ದಿನ ಯಾಕೆ ವಿಳಂಬ ಮಾಡಿದ್ರು..? ಗುಮ್ಮ ಬಂತು ಗುಮ್ಮ ಅಂತ ಹೇಳುತ್ತಲೇ ಹೋಗುತ್ತಾರೆ. ವೈಜ್ಞಾನಿಕವಾಗಿ ಜಾತಿ ಗಣತಿ ಬಿಡುಗಡೆಗೆ ನಮ್ಮ ಬೆಂಬಲ ಇದೆ.
ಎಪ್ರಿಲ್ 16 ಕ್ಕೆ ಹುಬ್ಬಳ್ಳಿಗೆ ಜನಾಕ್ರೋಶ ಯಾತ್ರೆ ಆಗಮಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ದಲಿತರನ್ನು ಓಟ್ ಬ್ಯಾಂಕ್ ಆಗಿ ಮಾತ್ರ ಮಾಡಿಕೊಂಡಿದೆ. ಎಸ್ ಸಿ ಪಿ ಟಿಎಸ್ ಪಿ ಹಣ ದುರ್ಬಳಕೆಯಾಗಿದೆ. ಒಂದು ಎಮ್ಮೆ ಕೊಡಿಸಲು ಕೂಡ ಎಮ್ಮೆ ಚರ್ಮದ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರತಿ ದಿನ ಒಂದಲ್ಲ ಒಂದು ಬೆಲೆ ಏರಿಕೆಯಾಗುತ್ತಿವೆ. ಸಿದ್ಧರಾಮಯ್ಯ ರಿಸರ್ಚ್ ಟೀಮ್ ಮಾಡಿದ್ದಾರೆ. ಆ ಟೀಮ್ ಎಲ್ಲೆಲ್ಲಿ ಹಣ ದರೋಡೆ ಮಾಡಬಹುದು ಅನ್ನೋದನ್ನು ಹೇಳುತ್ತದೆ. ನಮ್ಮ ಜಾಗದಲ್ಲಿ ನಾವು ಕಾರ್ ಪಾರ್ಕ್ ಮಾಡಿದ್ರು ಸೆಸ್ ಹಾಕ್ತಿದ್ದಾರೆ. ಎರಡು ವರ್ಷದಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಳ ಮಾಡಿದ್ದಾರೆ ಎಂದು ರಾಜೀವ್ ಹೇಳಿದ್ದಾರೆ.
ಕೇಂದ್ರ ದಿಂದ ಸಿಲಿಂಡರ್ ಬೆಲೆ ಏರಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ರಾಜೀವ್, ಹಣದುಬ್ಬರದಲ್ಲಿ ಕರ್ನಾಟಕ ಮೊದಲ ಸ್ಥಾನವಿದೆ. ರಾಜ್ಯ ಸರ್ಕಾಕದ ಅವೈಜ್ಞಾನಿಕ ಪಾಲಸಿಯಿಂದ ಆಗಿದೆ. ಆರ್ಥಿಕ ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸೋತಿದೆ. ಈ ಹೊರೆ ನಡುವೆ ಸಿಲಿಂಡರ್ ಬೆಲೆ ಹೆಚ್ಚಳ ಕೂಡ ಹೊರೆಯಾಗುತ್ತದೆ. ರಾಜ್ಯದ ಹಣದುಬ್ಬರ ಹೋಲಿಕೆ ಮಾಡಿದ್ರೆ ರಾಷ್ಟ್ರದ ಹಣದುಬ್ಬರ ಕಡಿಮೆಯಿದೆ ಎಂದು ಕೇಂದ್ರ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.
ಕಾಂಗ್ರೆಸ್ ಗಾಂಧೀಜಿ ಬೆಳಗಾವಿಗೆ ಬಂದು ಹೋದ ನೂರು ವರ್ಷದ ಕಾರ್ಯಕ್ರಮ ಅದ್ದೂರಿಯಾಗಿ ಮಾಡಿತು. ಆದ್ರೆ ನಿಪ್ಪಾಣಿಗೆ ಅಂಬೇಡ್ಕರ್ ಬಂದು ಹೋಗಿ ನೂರು ವರ್ಷವಾಯ್ತು. ಅಂಬೇಡ್ಕರ್ ಪಾದಸ್ಪರ್ಶದ ನೂರು ವರ್ಷ ಸಂಭ್ರಮವನ್ನು ಕಾಂಗ್ರೆಸ್ ಆಚರಿಸಲಿಲ್ಲ. ಹೀಗಾಗಿ ಬಿಜೆಪಿಯಿಂದ ಭೀಮ ಹೆಜ್ಜೆ ನೂರರ ಸಂಭ್ರಮ ಮಾಡುತ್ತಿದೆ. ಎಪ್ರಿಲ್ 11 ರಂದು ಬೆಂಗಳೂರಿನಲ್ಲಿ ರಥಯಾತ್ರೆ ಆರಂಭವಾಗಲಿದೆ. ಎಪ್ರಿಲ್ 15 ಕ್ಕೆ ನಿಪ್ಪಾಣಿ ತಲುಪಲಿದೆ. ಅಲ್ಲಿ ದೊಡ್ಡ ಸಮಾವೇಶ ಆಯೋಜಿಸಲಾಗಿದೆ ಎಂದು ರಾಜೀವ್ ಹೇಳಿದ್ದಾರೆ.