International News: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ನೌಕಾಪಡೆಗೆ ಫ್ರಾನ್ಸ್‌ನಿಂದ 64 ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ 26 ರಫೇಲ್ ಸಾಗರ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಸಮ್ಮತಿ ಸೂಚಿಸಿದೆ. ದೇಶದ ಭದ್ರತೆ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ಸಮಿತಿಯು ಈ ನಿರ್ಧಾರವನ್ನು ಅನುಮೋದಿಸಿದೆ.
ಇನ್ನೂ ಈ ಒಪ್ಪಂದವು 22 ಸಿಂಗಲ್-ಸೀಟರ್ ಮತ್ತು ನಾಲ್ಕು ಟ್ವಿನ್-ಸೀಟರ್ ರಫೇಲ್ ಸಾಗರ ಜೆಟ್‌ಗಳನ್ನು ಒಳಗೊಂಡಿರಲಿದೆ. ಯುದ್ಧ ವಿಮಾನಗಳ ನಿರ್ವಹಣೆ, ವ್ಯವಸ್ಥಾಪನಾ ಬೆಂಬಲ, ಸಿಬ್ಬಂದಿ ತರಬೇತಿ, ಮತ್ತು ಹೊಣೆಗಾರಿಕೆಯನ್ನು ಹೊಂದಿದೆ. ಜೊತೆಗೆ ಸ್ಥಳೀಯ ಉತ್ಪಾದನಾ ಘಟಕಗಳಿಗೆ ಸಮಗ್ರ ಪ್ಯಾಕೇಜ್ ಅನ್ನು ಕೂಡ ಈ ಒಪ್ಪಂದ ಒಳಗೊಂಡಿದೆ. ಅಲ್ಲದೆ ಇದಕ್ಕೆ ಸಹಿ ಹಾಕಿದ 5 ವರ್ಷಗಳ ಬಳಿಕ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಪೊರೈಕೆಯಾಗುವ ನಿರೀಕ್ಷೆ ಇದೆ. ಅಲ್ಲದೆ ಇವುಗಳನ್ನು ಪಡೆದ ಬಳಿಕ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್, ವಿಕ್ರಮಾದಿತ್ಯದಲ್ಲೂ ರಫೇಲ್ ಅನ್ನು ನಿಯೋಜಿಸಲಾಗುತ್ತದೆ. ಅಂದಹಾಗೆ ದೇಶದ ನೌಕಾ ಪಡೆಯಲ್ಲಿ ಸದ್ಯ ಇರುವ ಮಿಗ್-29ಕೆ ಯುದ್ಧ ವಿಮಾನಗಳ ಸ್ಥಾನದಲ್ಲಿ ಕಾರ್ಯಾಚರಣೆ ನಡೆಸಲಿವೆ. ಇನ್ನೂ ಭಾರತದ ವಾಯುಪಡೆಯ ಅಂಬಾಲ ಮತ್ತುಹಾಶಿಮಾರನೆಲೆಯಲ್ಲಿ ಈಗಾಗಲೇ 36 ರಫೇಲ್ ಜೆಟ್‌ಗಳು ಇವೆ.
ಭಾರತದ ಯುದ್ಧ ಸಾಮರ್ಥ್ಯ ಹೆಚ್ಚಳ..
ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಅಭಿವೃದ್ಧಿಪಡಿಸಿದ ರಫೇಲ್ ಎಂ ವಿಮಾನದ ವಿತರಣಾ ಸಮಯವು ಒಪ್ಪಂದಕ್ಕೆ ಸಹಿ ಹಾಕಿದ ನಂತರ 37 ರಿಂದ 65 ತಿಂಗಳುಗಳವರೆಗೆ ಇರುತ್ತದೆ. ಈ ಒಪ್ಪಂದವನ್ನು ಪ್ರಸ್ತುತ ಅಂತರ-ಸರ್ಕಾರಿ ಒಪ್ಪಂದದ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತಿದೆ. ಇದು ಡಸಾಲ್ಟ್ ಏವಿಯೇಷನ್‌ನಿಂದ ವೇಗದ ವಿತರಣೆ ಮತ್ತು ಲಾಜಿಸ್ಟಿಕಲ್ ಮತ್ತು ನಿರ್ವಹಣಾ ಬೆಂಬಲವನ್ನು ಖಚಿತಪಡಿಸುತ್ತದೆ. ಕಡಲ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ರಫೇಲ್ ಮೆರೈನ್ ಅತ್ಯಾಧುನಿಕ ಏವಿಯಾನಿಕ್ಸ್, ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ನೌಕಾ ಕಾರ್ಯಾಚರಣೆಗಳಿಗೆ ಅನುಗುಣವಾಗಿ ರೂಪಿಸಲಾಗಿದೆ. ಇದರ ಸೇರ್ಪಡೆಯು ಸಮುದ್ರದಲ್ಲಿ ಭಾರತದ ಯುದ್ಧ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಪ್ರಮಖವಾಗಿ ಇವುಗಳ ಆಗಮನದಿಂದ ಭಾರತದ ವೈರಿಗಳಾದ ಪಾಕಿಸ್ತಾನ ಹಾಗೂ ಚೀನಾ ವಿರುದ್ಧ ಪ್ರಬಲವಾಗಿ ಯುದ್ಧ ಸಾರಲು ಇನ್ನಷ್ಟು ಬಲ ಬಂದಂತಾಗುತ್ತದೆ. ಅಂದುಕೊಂಡಂತೆ ಎಲ್ಲಾ ಜೆಟ್‌ಗಳು 2030-31 ರ ವೇಳೆಗೆ ವಿತರಣೆಯಾಗುವ ಸಾಧ್ಯತೆಯಿದ್ದು, ಸೇನಾ ಬತ್ತಳಿಕೆಯಲ್ಲಿ ಒಟ್ಟು 62 ರಫೇಲ್ ಯುದ್ಧ ವಿಮಾನಗಳು ಶತ್ರುಗಳನ್ನು ಬಗ್ಗು ಬಡೆಯಲಿವೆ.