Political News: ಶಾಸಕ ವಿನಯ್ ಕುಲಕರ್ಣಿ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಬಹಿರಂವಾಗಿದೆ. ಈ ಕುರಿತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಮಹತ್ವದ ವಾದ ಮಂಡನೆಯಾಗಿದೆ. ರಾಜಕಾರಣಿಯೊಬ್ಬರ ಬಳಿ ನನಗೆ 15 ಕೋಟಿ ರೂಪಾಯಿಗಳನ್ನು ಕೊಟ್ಟರೆ ನಾನು ಮಾಫಿ ರೂಪದ ಸಾಕ್ಷಿಯಾಗುವೆ. ಇದರಿಂದ ವಿನಯ್ ಕುಲಕರ್ಣಿಯವರ ರಾಜಕೀಯ ಭವಿಷ್ಯ ಕೊನೆಗಾಣಿಸುತ್ತೇನೆ. ಅಲ್ಲದೆ ಅವರನ್ನು ಕೊಲೆ ಪ್ರಕರಣದಲ್ಲಿ ಸಿಕ್ಕಿಹಾಕಿಸುವೆ ಎಂದು ಧಾರವಾಡದ ಹೆಬ್ಬಳ್ಳಿಯ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಮೊದಲ ಆರೋಪಿ ಬಸವರಾಜ ಮುತ್ತಗಿ, ಉದ್ಯಮಿ ಐಶ್ವರ್ಯ ಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನೂ ಇದೇ ವಿಚಾರ ಹೈಕೋರ್ಟ್‌ನಲ್ಲಿ ಚರ್ಚೆಯಾಗಿದೆ.
ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ, ಅಶ್ವತ್ಥ್ ಹಾಗೂ ದಿನೇಶ್ ಸೇರಿದಂತೆ ಇತರ ಆರೋಪಿಗಳಿಂದ ಸಲ್ಲಿಕೆಯಾಗಿರುವ ರಿಟ್ ಹಾಗೂ ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ. ಇನ್ನೂ ಯೋಗೀಶ್ ಗೌಡ ಕೊಲೆ ಪ್ರಕರಣಲ್ಲಿ ಮೂರನೇ ಬಾರಿಗೆ ಮಾಫಿ ಸಾಕ್ಷಿಯಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮುತ್ತಗಿಯನ್ನು ಪರಿಗಣಿಸಲು ತೀರ್ಮಾನಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ವೇಳೆ ವಿನಯ್ ಕುಲಕರ್ಣಿ ಪರವಾಗಿ ಹಿರಿಯ ವಕೀಲರಾದ ಸಿ.ವಿ. ನಾಗೇಶ್ ವಾದ ಮಂಡಿಸಿದ್ದಾರೆ.
ಅಲ್ಲದೆ ರಾಜಕಾರಣಿಯೊಬ್ಬರ 15 ಕೋಟಿ ರೂಪಾಯಿ ಕೊಡಿಸು, ಅವರಿಗೆ ಪೂರಕವಾಗುವಂತೆ ನಾನು ಮಾಫಿ ಸಾಕ್ಷಿಯಾಗುತ್ತೇನೆ. ಇನ್ನೂ ವಿನಯ್ ಕುಲಕರ್ಣಿಯವರನ್ನು ಮರ್ಡರ್ ಕೇಸ್‌ನಲ್ಲಿ ಸಿಲುಕಿಸುವೆ ಎಂಬ ಮಾತುಕತೆಯ ವಿವರವುಳ್ಳ ಪೆನ್ ಡ್ರೈವ್ ಒಳಗೊಂಡ ದಾಖಲೆಗಳು ನಮ್ಮ ಬಳಿ ಇವೆ ಎಂದು ಅವುಗಳನ್ನು ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದ್ದಾರೆ. ಅಲ್ಲದೆ ಪ್ರತಿಯಾಗಿ ವಾದ ಮಂಡಿಸಿ ಮುತ್ತಗಿ ಪರ ವಕೀಲ ನಾಗೇಂದ್ರ ನಾಯಕ್, ಈ ಆರೋಪಗಳು ಸತ್ಯಕ್ಕೆ ಹತ್ತಿರವಾಗಿಲ್ಲ. ಬದಲಿಗೆ ವಿನಯ್ ಕುಲಕರ್ಣಿಗೆ ಐಶ್ವರ್ಯ ಗೌಡ 40 ಕೋಟಿ ರೂಪಾಯಿ ಕೊಡಬೇಕಿತ್ತು. ಇದನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ಮುತ್ತಗಿಗೆ ನೀಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದ ಸಂಭಾಷಣೆ ಆಗಿದೆಯೇ ಹೊರತು , ಮಾಫಿ ಸಾಕ್ಷಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೆ ಇದಕ್ಕೆ ಪೂರಕವಾಗುವಂತೆ ನಮ್ಮ ಬಳಿಯೂ ಪೆನ್ ಡ್ರೈವ್ ಇದೆ ಎಂಬ ಪ್ರತಿವಾದವನ್ನು ವಕೀಲ ನಾಯಕ್ ಮಂಡಿಸಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್, ಆರೋಪಿಗಳ ಪರ ಪದಾಂಕಿತ ಹಿರಿಯ ವಕೀಲರಾದ ಸಂದೇಶ್ ಜೆ.ಚೌಟ, ಎಂ.ಎಸ್.ಶ್ಯಾಮ್‌ಸುಂದರ್, ವಿನಯ ಕುಲಕರ್ಣಿ ಪರ ವಕಾಲತ್ತು ವಹಿಸಿರುವ ಹೈಕೋರ್ಟ್ ವಕೀಲ ಎಸ್.ಸುನಿಲ್ ಕುಮಾರ್ ಮತ್ತು ದಿನೇಶ್ ಹಾಗೂ ಅಶ್ವತ್ಥ್ ಪರ ಜಿ.ಲಕ್ಷ್ಮಿಕಾಂತ ಇದ್ದರು. ಸುದೀರ್ಘ ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತ್ತು.
ಅಂದಹಾಗೆ ಧಾರವಾಡ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 2016ರ ಜೂನ್ 15ರಂದು ಯೋಗೀಶ್‌ಗೌಡ ಕೊಲೆ ನಡೆದಿತ್ತು. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದಾರೆ. ಬಸವರಾಜ ಮುತ್ತಗಿಯೇ ಹತ್ಯೆಯ ಪ್ರಮುಖ ಆರೋಪಿ. ಹತ್ಯೆ ನಡೆಸಲು ಬೆಂಗಳೂರಿನಿಂದ ಹುಡುಗರನ್ನು ಧಾರವಾಡಕ್ಕೆ ಕರೆಸಿಕೊಂಡಿದ್ದೇ ಬಸವರಾಜ ಮುತ್ತಗಿ ಎಂಬುದನ್ನು ಸಿಬಿಐ ಪ್ರತಿಪಾದಿಸಿದೆ. ಇನ್ನೂ ಐಶ್ವರ್ಯ ಗೌಡ ಕೂಡ ಹಲವರಿಗೆ ಚಿನ್ನ ವಂಚನೆ ಮಾಡಿರುವ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿದ್ದಾರೆ.