ಬೆಂಗಳೂರು : ಅಕ್ರಮ ಗಣಿಗಾರಿಕೆ(Illegal mining)ಯಿಂದ ರಾಜಕೀಯದಿಂದಲೇ ದೂರವುಳಿದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ(G. Janardhana Reddy) ಮತ್ತೆ ಗಣಿಯ ವಿಚಾರದಲ್ಲಿ ಕಂಟಕ ಎದುರಾಗಿದೆ. ಅಕ್ರಮವಾಗಿ ಅದಿರು ಮಾರಾಟ ಮಾಡಿ ರಾಜ್ಯ ಸರ್ಕಾರಕ್ಕೆ 23,89,650 ರೂಪಾಯಿ ಯಷ್ಟು ಆರ್ಥಿಕ ನಷ್ಟವನ್ನು ಉಂಟು ಮಾಡಿರುವುದರಿಂದ, ಆರೋಪಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು 63ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಮೂರ್ತಿ ಪ್ರೀತ್ ಜೆ (Justice Preet J) ಆದೇಶ ಹೊರಡಿಸಿದ್ದಾರೆ. 2009-10 ರಲ್ಲಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಹಲವು ಕಡೆ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿ ಖಾನ್ ಮತ್ತು ಶ್ರೀನಿವಾಸ ರೆಡ್ಡಿ ಸೇರಿದಂತೆ ಹಲವರ ಮನೆ, ಸಂಸ್ಥೆ, ಕಚೇರಿಗಳ ಮೇಲೆ ದಾಳಿ ನಡೆಸಿ, ಡಿಜಿಟಲ್ ದತ್ತಾಂಶ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಆಪ್ತ ಕಾರ್ಯದರ್ಶಿ ಮತ್ತು ಮತ್ತು ದೇವಿ ಎಂಟರ್‌ಪ್ರೈಸಸ್(Devi Enterprises) ಪಾಲುದಾರ ಕೆ ಮೆಹಫೂಜ್ ಅಲಿ ಖಾನ್ ಮತ್ತು ಓಬಳಾಪುರಂ ಮೈನಿಂ ಕಂಪೆನಿ ನಿರ್ದೇಶಕ ಮತ್ತು ಶ್ರೀ ಮಿನರಲ್ಸ್‌ನ ಪಾಲುದಾರ ಬಿ ವಿ ಶ್ರೀನಿವಾಸ ರೆಡ್ಡಿ ಅವರ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ಮತ್ತು ನಿಯಂತ್ರಣಗಳ ಕಾಯಿದೆ 1957ರ ಸೆಕ್ಷನ್ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶಿಸಿದೆ.