ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು,”ದೇವೇಗೌಡರು ಅಪಾರ ಜನಸೇವೆ ಮಾಡಿದ್ದಾರೆ. ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರೊಬ್ಬ ಛಲಗಾರರು. ಅವರ ಆಶೀರ್ವಾದ, ಮಾರ್ಗದರ್ಶನ ಪಡೆಯಲು ಬಂದಿದ್ದೇನೆ ಎಂದು ಹೇಳಿದರು.
ಚುನಾವಣಾ ರಾಜಕಾರಣ ಮುಕ್ತಾಯವಾಗಿದೆ. ಇನ್ನು ರಾಜ್ಯದ ಹಿತ ಕಾಪಾಡುವತ್ತ ಗಮನಹರಿಸಬೇಕು. ಈ ವಿಚಾರವಾಗಿ ಅವರ ಸಲಹೆ ಪಡೆದಿದ್ದೇವೆ. ಅವರು ಕೂಡ ಬಹಳ ಸ್ಪೂರ್ತಿಯಿಂದ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
ವಿಧಾನಸಭೆ ಪಡಸಾಲೆಯಲ್ಲಿ ವಿರೋಧ ಪಕ್ಷಗಳ ನಾಯಕರ ಜತೆ ಬಹಳ ಆತ್ಮೀಯ ಮಾತುಕತೆ ಮೂಲಕ ಪಾಸಿಟಿವ್ ಆಗಿರುವ ಬಗ್ಗೆ ಕೇಳಿದಾಗ, ‘ಚುನಾವಣೆ ಮುಗಿದಿದೆ. ನೆಗೆಟಿವ್ ನಿಂದ ಯಾವ ಪ್ರಯೋಜನವಿದೆ? ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಜನ ನಮ್ಮ ಮೇಲೆ ನಂಬಿಕೆ ಇಟ್ಟಿದ್ದು, ನಾವು ಅದನ್ನು ಕಾರ್ಯರೂಪಕ್ಕೆ ತರಬೇಕು. ನಾವು ಕಾಂಗ್ರೆಸ್ ಪಕ್ಷದವರು, ನುಡಿದಂತೆ ನಡೆಯುತ್ತೇವೆ. ನಾನು ಸದಾ ಸಕಾರಾತ್ಮಕವಾಗಿ ಆಲೋಚಿಸುತ್ತೇನೆಯೇ ಹೊರತು ಋಣಾತ್ಮಕವಾಗಿ ಆಲೋಚನೆ ಮಾಡುವುದಿಲ್ಲ. ನಾನು ಇಂದು ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ ಅವರನ್ನು ಭೇಟಿ ಮಾಡಿ ನಂತರ ದೇವೇಗೌಡರನ್ನು ಭೇಟಿ ಮಾಡಿದ್ದೇನೆ’ ಎಂದು ತಿಳಿಸಿದರು.
ದೇವೇಗೌಡರು ಯಾವ ಸಲಹೆ ನೀಡಿದ್ದಾರೆ ಎಂದು ಕೇಳಿದಾಗ, ‘ಕಾವೇರಿ ನೀರು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಹೇಗೆ ಬಳಸಿಕೊಳ್ಳಬೇಕು ಎಂದು ಚರ್ಚೆ ಮಾಡಿದ್ದು, ಅವರು ಕೊಟ್ಟಿರುವ ಸಲಹೆ ಬಹಿರಂಗಪಡಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
ಒಕ್ಕಲಿಗ ಸಿಎಂ ವಿಚಾರವಾಗಿ ಚರ್ಚೆ ಏನಾದರೂ ನಡೆಯಿತೇ ಎಂದು ಕೇಳಿದಾಗ, ‘ಈಗ ಸಮುದಾಯದ ಆಧಾರದ ಮೇಲೆ ಚರ್ಚೆ ಮಾಡುವುದಿಲ್ಲ. ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ’ ಎಂದು ತಿಳಿಸಿದರು.
ಇಂದು ಕೂಡ ಮಳೆ ಸುರಿಯುತ್ತಿರುವ ಬಗ್ಗೆ ಕೇಳಿದಾಗ, ‘ನಾನು, ಮುಖ್ಯಮಂತ್ರಿಗಳು, ಸಚಿವರು, ಅಧಿಕಾರಿಗಳು ಈ ವಿಚಾರವಾಗಿ ಚರ್ಚೆ ಮಾಡಿದ್ದು, ಎಲ್ಲೆಲ್ಲಿ ಕಿರಿದಾದ ಅಂಡರ್ ಪಾಸ್ ಗಳು ಇವೆಯೋ ಅಲ್ಲಿ ಯಾವ ಬದಲಿ ವ್ಯವಸ್ಥೆ ಮಾಡಬೇಕು, ಸುದೀರ್ಘ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ಮಾತುಕತೆ ನಡೆಸಿದ್ದೇವೆ’ ಎಂದು ತಿಳಿಸಿದರು.
‘ರಾಜಕೀಯ, ಸಾಮಾಜಿಕ ಕ್ಷೇತ್ರದಲ್ಲಿ ದೇವೇಗೌಡ ಅವರು ಇಟ್ಟ ಪ್ರತೀ ಹೆಜ್ಜೆಗಳು ನಮಗೆ ಒಂದು ಪಾಠ’