ಡಿಸಿಎಂ ಡಿಕೆ ಶಿವಕುಮಾರ್ ಮಹಾನ್ ದೈವ ಭಕ್ತರು. ಪ್ರಯತ್ನ ವಿಫಲವಾದ್ರೂ ಪ್ರಾರ್ಥನೆ ವಿಫಲ ಆಗಲ್ಲ ಅಂತಾ ಹೇಳ್ತಿರ್ತಾರೆ. ತಮ್ಮ ಮಹಾತ್ವಾಕಾಂಕ್ಷೆಯನ್ನು ಸಾಕಾರ ಮಾಡಿಕೊಳ್ಳುವುದಕ್ಕೆ, ದೇವರ ಮೊರೆ ಹೋಗಿದ್ದಾರೆ. ಎಲ್ಲೇ ಹೋದ್ರೂ ದೇಗುಲಗಳಿಗೆ ಭೇಟಿ ಕೊಟ್ಟು ಸಂಕಲ್ಪ ಮಾಡ್ತಿದ್ದಾರೆ.
ಹಾಸನಾಂಬೆ ದರ್ಶನದ ವೇಳೆಯೂ ಸಂಕಲ್ಪ ಮಾಡಿ, ನಾರಾಯಣಿ ಮತ್ತು ಖಡ್ಗಮಾಲಾ ಸ್ತೋತ್ರ ಪಠಿಸಿದ್ರು. ಆ ವೇಳೆ 2 ಬಾರಿ ಹೂವಿನ ಪ್ರಸಾದ ಸ್ವೀಕರಿಸಿದ್ದ ಡಿಕೆಶಿ ಖುಷಿ ಆಗಿದ್ರು. ಈಗ ರಾಯರ ಸನ್ನಿಧಾನಕ್ಕೂ ಭೇಟಿ ಕೊಟ್ಟಿದ್ದಾರೆ. ಇದೇ ವೇಳೆ ಗಾಣದಾಳ ಗ್ರಾಮದ ಪಂಚಮುಖಿ ಪ್ರಾಣದೇವರ ದರ್ಶನವನ್ನೂ ಪಡೆದಿದ್ದು, ಸಂಕಲ್ಪ ಮಾಡಿದ್ದಾರೆ. ಜೊತೆಗೆ ಪುಷ್ಪಾರ್ಚನೆ, ವೇದ ಮಂತ್ರ ಪಠಣ, ಅಭಿಷೇಕದಲ್ಲಿ ಭಾಗಿಯಾಗಿದ್ದಾರೆ. ಪತ್ನಿ, ಮಕ್ಕಳು ಸೇರಿ ಕುಟುಂಬಸ್ಥರ ಹೆಸರಲ್ಲಿ ಅರ್ಚನೆ ಮಾಡಿಸಿದ್ದಾರೆ.
ಡಿಕೆಶಿ ಸಂಕಲ್ಪದ ಬಗ್ಗೆ ಪಂಚಮುಖಿ ಆಂಜನೇಯ ದೇಗುಲದ ಪ್ರಧಾನ ಅರ್ಚಕ ಶಾಮಾಚಾರ್ಯರು ಮಾತನಾಡಿದ್ದು, ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ. ರಾಘವೇಂದ್ರ ಸ್ವಾಮಿಗಳು 12 ವರ್ಷ ತಪ್ಪಸ್ಸು ಮಾಡಿರುವ ಕ್ಷೇತ್ರ ಪಂಚಮುಖಿ. ರಾಯರ ಗುರುಗಳು ಪಂಚಮುಖಿ ಪ್ರಾಣದೇವರು. ರಾಘವೇಂದ್ರ ಶ್ರೀಗಳ ಮನೆ ದೇವರು ಲಕ್ಷ್ಮೀ ವೆಂಕಟರಮಣ ಸ್ವಾಮಿ. ಇವರೆಲ್ಲಾ ರಾಘವೇಂದ್ರ ಸ್ವಾಮಿಗಳಿಗೆ ದರ್ಶನ ಕೊಟ್ಟಿದ್ದಾರೆ. ರಾಘವೇಂದ್ರ ಸ್ವಾಮಿಗಳು ಬೃಂದಾವನ ಪ್ರವೇಶಿಸಿ 353 ವರ್ಷ ಆಗಿದೆ.
ಮುಂದೆ ಮುಖ್ಯಮಂತ್ರಿ ಆಗಬೇಕೆಂಬುದು ಅವರ ಆಸೆ. ಸಂಕಲ್ಪ ಮಾಡಿಸಿದ್ದಾರೆ. ಅವರು ಗ್ಯಾರಂಟಿ ಮುಖ್ಯಮಂತ್ರಿ ಆಗ್ತಾರೆ. ಮತ್ತು ಕೆಲವು ವರ್ಷಗಳ ಹಿಂದೆ ದರ್ಶನ ಮಾಡಿಕೊಂಡು ಹೋಗಿದ್ರು. ಈಗ ಡಿಸಿಎಂ ಆಗಿದ್ದಾರೆ. ಪಂಚಮುಖಿ ಪ್ರಾಣದೇವರು, ರಾಯರ ಆಶೀರ್ವಾದ ಅವರಿಗಿದೆ.
ಇಷ್ಟ ಕಾರ್ಯ ನೆರವೇರಲಿ ಎಂದು ಅವರು ಹೇಳಿದ್ರು. ಹಾಗಾಗಿ ಪಂಚಮುಖಿ ಪ್ರಾಣದೇವರಿಗೆ ಬೆಳಗ್ಗೆ ಜೇನುತುಪ್ಪದ ಅಭಿಷೇಕ ನೆರವೇರಿಸಲಾಗಿದೆ. 108 ಮಂತ್ರಗಳನ್ನು ಹೇಳುತ್ತಾ ಅವರ ಕೈಯ್ಯಿಂದಲೇ ಪುಷ್ಪಾರ್ಚನೆ ಮಾಡಿಸಲಾಗಿದೆ. ಇಂದು ದೀಪಾವಳಿ ಪಾಡ್ಯ. ಸ್ವಾತಿ ನಕ್ಷತ್ರ. ಬಹಳ ವಿಶೇಷ ದಿನದಲ್ಲಿ ಸಂಕಲ್ಪ ಮಾಡಿಸಿದ್ದಾರೆ. ಅವರು ಮನಸ್ಸಿನಲ್ಲಿ ಬೇಡಿಕೊಂಡಿದ್ದಾರೆ. ಅವರ ಇಷ್ಟಕಾರ್ಯಗಳು ಗ್ಯಾರಂಟಿ ನೆರವೇರುತ್ತದೆ.
ಪಂಚಮುಖಿ ಪ್ರಾಣದೇವರ ಬಳಿ ಬಂದು ಬೇಡಿಕೊಂಡು ಹೋದ್ಮೇಲೆ, ಒಂದೆರೆಡು ದಿನ ಹೆಚ್ಚು ಕಡಿಮೆ ಆಗಬಹುದು. ಆದರೆ ಅವರು ಅಂದುಕೊಂಡಿದ್ದು ಆಗೇ ಆಗುತ್ತದೆ ಎಂದು ಪ್ರಧಾನ ಅರ್ಚಕರು ಹೇಳಿದ್ದಾರೆ.
ಇನ್ನು, ಸಂಕಲ್ಪದ ಬಗ್ಗೆ ಮಾಧ್ಯಮಗಳು ಡಿಕೆಶಿ ಅವ್ರನ್ನ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಡಿಕೆಶಿ, ಸಂಕಲ್ಪ ಮಾಡಿದ್ದಕ್ಕೆ ನಮ್ಮ ಸರ್ಕಾರ ಬಂದಿದೆ ಎಂದಿದ್ದಾರೆ. ಅಂದ್ರೆ, ಪರೋಕ್ಷವಾಗಿ ಸಂಕಲ್ಪ ಮಾಡಿದ್ದೇನೆ. ಸಿಎಂ ಆಗೇ ಆಗ್ತೀನಿ ಅನ್ನೋದನ್ನು ಮಾರ್ಮಿಕವಾಗಿ ಹೇಳಿದ್ದಾರೆ. ಒಟ್ನಲ್ಲಿ ಡಿಕೆಶಿ ಸಂಕಲ್ಪದ ಶಕ್ತಿ ಸ್ಟ್ರಾಂಗ್ ಆಗಿರುವಂತೆ ಕಾಣಿಸ್ತಿದೆ. ಎಲ್ಲಾ ಪ್ರಶ್ನೆಗಳಿಗೂ ನವೆಂಬರ್ 14ರ ಬಳಿಕ ಉತ್ತರ ಸಿಗಲಿದೆ.