ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಆಗುತ್ತಾ? ಇಲ್ವಾ? ಎಂಬ ಚರ್ಚೆಗೆ ಹೊಸ ಆಯಾಮ ಸಿಕ್ಕಿದೆ. ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಲಿದೆ. ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ನಡೆಯಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಆದರೆ ಸಿದ್ದರಾಮಯ್ಯ ಬಣ ನಾಯಕತ್ವ ಬದಲಾವಣೆ ಇಲ್ಲ ಎನ್ನುತ್ತಿದ್ರೆ, ಡಿಸಿಎಂ ಡಿಕೆ ಶಿವಕುಮಾರ್ ನಡೆಸುತ್ತಿರುವ ಶತಪ್ರಯತ್ನ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಸಚಿವ ಸಂಪುಟ ಪುನಾರಚನೆಯಾದ್ರೆ, ಸಿಎಂ ಸಿದ್ದರಾಮಯ್ಯ ಖುರ್ಚಿ ಸೇಫ್ ಎಂಬುವುದು ಬಹುತೇಕ ಖಚಿತವಾಗುತ್ತಿದೆ.
ಸಂಪುಟ ಪುನಾರಚನೆಗೆ ಸಾಕಷ್ಟು ಒತ್ತಾಯ ಕೇಳಿ ಬರುತ್ತಿವೆ. ಆದರೆ ಹೈಕಮಾಂಡ್ ಮಾತ್ರ ಇದಕ್ಕೆ ಓಕೆ ಅಂದಿಲ್ಲ. ಎರಡೂವರೆ ವರ್ಷ ತುಂಬಿದ ಬಳಿಕ ಸಚಿವ ಸಂಪುಟ ಪುನಾರಚನೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಮಂತ್ರಿಗಿರಿ ಪಡೆದುಕೊಳ್ಳಲು ಸಾಕಷ್ಟು ಸಚಿವರು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಹೈಕಮಾಂಡ್ ಮಾತ್ರ ಸೈಲೆಂಟಾಗಿದೆ.
ರಾಜ್ಯದಲ್ಲಿ ನವೆಂಬರ್ ತಿಂಗಳಲ್ಲಿ ಕ್ರಾಂತಿ ನಡೆಯಲಿದೆ ಎಂದು ರಾಜಣ್ಣ ಹೇಳಿದ್ದರು. ಆದರೆ ಆ ಕ್ರಾಂತಿ ಏನು ಎನ್ನುವುದು ಇನ್ನೂ ದೃಢಪಟ್ಟಿಲ್ಲ. ಇದೀಗ ರಾಜಣ್ಣರ ಮತ್ತೊಂದು ಸ್ಫೋಟಕ ಸುಳಿವು ನೀಡಿದ್ದಾರೆ. ಅದೇ ಸಚಿವ ಸಂಪುಟ ಪುನಾರಚನೆ. ಒಂದು ವೇಳೆ ಹೈಕಮಾಂಡ್ ನಾಯಕರು ಸಂಪುಟ ಪುನಾರಚನೆಗೆ ಒಪ್ಪಿಗೆ ಕೊಟ್ಟರೆ, ಸಿದ್ದರಾಮಯ್ಯ ನಾಯಕತ್ವ ಅಬಾಧಿತ ಎಂದಿದ್ದಾರೆ.
ಸಂಪುಟ ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಕೊಡದೆ ಇದ್ದಲ್ಲಿ, ನಾಯಕತ್ವ ಬದಲಾವಣೆ ಬೆಳವಣಿಗೆ ನಡೆಯಲಿದೆ ಎಂಬ ಅರ್ಥದಲ್ಲಿ ಹೇಳಿದ್ದಾರೆ. ರಾಜಣ್ಣ ಹೇಳಿಕೆ ಇದೀಗ ಸಂಚಲನ ಸೃಷ್ಟಿಸಿದೆ. ಹೈಕಮಾಂಡ್ ಸಂಪುಟ ಪುನಾರಚನೆಗೆ ನವೆಂಬರ್ ತಿಂಗಳಲ್ಲಿ ಓಕೆ ಅನ್ನುತ್ತಾ? ಅಥವಾ ನಾಯಕತ್ವ ಬಲಾವಣೆಯಂತಹ ಹೆಜ್ಜೆಯನ್ನು ಇಡಲಿದ್ಯಾ? ಎಂಬ ಪ್ರಶ್ನೆ ಕಾಡುತ್ತಿದೆ.
ಈ ನಡುವೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರ ದೆಹಲಿ ಪ್ರವಾಸ ಮಹತ್ವ ಪಡೆದುಕೊಂಡಿದೆ. ಡಿಕೆ ಶಿವಕುಮಾರ್ ಪದೇ ಪದೇ ದೆಹಲಿಗೆ ತೆರಳುತ್ತಿದ್ದಾರೆ. ಸಿದ್ದರಾಮಯ್ಯ ನವೆಂಬರ್ 15ಕ್ಕೆ ದೆಹಲಿಗೆ ತೆರಳಲಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಮಾತುಕತೆ ನಡೆಸುವ ಸಾಧ್ಯತೆ ಇದೆ.

